

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ‘ಜೀರೋ’ ಚಿತ್ರದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಚಿತ್ರರಂಗಕ್ಕೆ ಅವರು ಬೈ ಬೈ ಹೇಳುತ್ತಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು.
ಆದರೆ ಇದೀಗ ಅವರ ಕುರಿತ ಮಾಹಿತಿಯೊಂದು ಹೊರಬಿದ್ದಿದೆ. ಭಾರತದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ರೆಡಿ ಆಗುತ್ತಿದ್ದು, ಅವರ ಪಾತ್ರದಲ್ಲಿ ನಟಿ ಅನುಷ್ಕಾ ಕಾಣಿಸಿಕೊಳ್ಳಲಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ, ಪತಿ ವಿರಾಟ್ ಕೊಹ್ಲಿಯಂತೆ ಮೈದಾನಕ್ಕೆ ಇಳಿದು ಆಟ ಆಡಲಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಅನುಷ್ಕಾ ಶರ್ಮಾ ಭಾರತ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ನಡೆದಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಇನ್ನೊಂದು ವಿಶೇಷ ಅಂದರೆ ಈ ವೇಳೆ ಅನುಷ್ಕಾ ಜತೆ ಜೂಲನ್ ಗೋಸ್ವಾಮಿ ಕೂಡ ಇದ್ದಿದ್ದು, ಈಡನ್ ಗಾರ್ಡನ್ ಮೈದಾನದಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದೆ ಎಂಬುದಕ್ಕೆ ಈ ಫೋಟೊಗಳು ಪುಷ್ಟಿ ನೀಡಿವೆ. ಭಾರತೀಯ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನಾಧಾರಿತ ಚಿತ್ರ ಕೂಡ ನಿರ್ವಣವಾಗುತ್ತಿದ್ದು, ಮಿಥಾಲಿ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್