

ಬೆಂಗಳೂರು: ಬಾಲಿವುಡ್‌ನ ಹಲವಾರು ಕಲಾವಿದರು ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದಾರೆ. ಈ ಹಿಂದೆ ಅನಿಲ್ ಕಪೂರ್ ಕನ್ನಡದ ‘ಪಲ್ಲವಿ ಅನುಪಲ್ಲವಿ’ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಅಕ್ಷಯ್ ಕುಮಾರ್, ಸಂಜಯ್ ದತ್ ಹಾಗೂ ನಟಿಯರಾದ ಶಿಲ್ಪಾ ಶೆಟ್ಟಿ, ರವೀನಾ ಟಂಡನ್ ಸೇರಿ ಹಲವಾರು ಕಲಾವಿದರು, ನಿರ್ದೇಶಕರು, ತಾಂತ್ರಿಕ ವರ್ಗದವರು ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಹಿಂದಿಯ ‘ಗ್ಯಾಂಗ್’, ‘ಭೂತ್‌ನಾಥ್ ರಿರ್ಟನ್ಸ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ‘ಲಿಯೋ’ ಸಿನಿಮಾದ ಮೂಲಕ ಅನುರಾಗ್ ಕಶ್ಯಪ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಆಗಮಿಸಿದ್ದ ಅವರು, ಬಳಿಕ ತಮಿಳಿನ ‘ಮಹಾರಾಜ’, ‘ವಿಡುದಲೈ-2’, ಮಲಯಾಳಂನ ‘ರೈಫಲ್ ಕ್ಲಬ್’ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ‘ಡಕಾಯಿತ್’ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಈ ನಡುವೆ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಸಿನಿಮಾವಾಗಿದ್ದು, ಸುಜಯ್ ಶಾಸ್ತ್ರೀ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಹೊಸ ಚಿತ್ರವನ್ನು ಅನೌನ್ಸ್ ಮಾಡಿ, ಟೈಟಲ್ ರಿವೀಲ್ ಮಾಡಲಾಯಿತು. ಚಿತ್ರಕ್ಕೆ ‘8’ ಎಂದು ಹೆಸರಿಡಲಾಗಿದೆ. ಸುಜಯ್ ಶಾಸ್ತ್ರೀ, ‘ನಾನು ಕಥೆ ಹೇಳಲೆಂದು ಮೊದಲು ಮುಂಬೈಗೆ ಹೋದಾಗ ಅನುರಾಗ್ ತುಂಬಾ ಬಿಜಿಯಿದ್ದರು. ಆ ನಡುವೆಯೂ ಕಥೆ ಕೇಳಿದರು. ಮೊದಲಿಗೆ ಸಿನಿಮಾ ಮಾಡಲು ಆಗುವುದಿಲ್ಲ ಎಂದಿದ್ದರು. ಆದರೆ, ಯಾವಾಗ ಕಥೆ ಕೇಳಿದಾಗ, ಮುಂದಿನ ಕಾರ್ಯಗಳನ್ನು ಮುಂದುವರಿಸಿ, ನಾನು ಬರುತ್ತೇನೆ ಎಂದು ಭರವಸೆ ನೀಡಿದರು. ಇದೊಂದು ವಿರಳವಾದ ಕಥೆ’ ಎಂದು ಮಾಹಿತಿ ನೀಡುತ್ತಾರೆ.
ಎಮೋಷನಲ್ ಕಥೆ: ‘8’ ಸಿನಿಮಾದ ಮೂಲಕ ಕನ್ನಡಕ್ಕೆ ಆಗಮಿಸುತ್ತಿರುವ ನಟ, ನಿರ್ದೇಶಕ ಅನುರಾಗ್ ಕಶ್ಯಪ್, ‘ಇದೊಂದು ಎಮೋಷನಲ್ ಕಥೆಯಾಗಿದೆ. ಎಲ್ಲರಿಗೂ ಜೀವನದಲ್ಲಿ ಎರಡನೇ ಅವಕಾಶ ಇದ್ದೇ ಇರುತ್ತದೆ. ಈ ಚಿತ್ರ ಕೂಡ ಅದನ್ನೇ ಹೇಳುತ್ತಿದೆ. ಇನ್ನು ಸಿನಿಮಾಗಳಲ್ಲಿ ಕಥೆ ಹೇಳುವುದು ಮುಖ್ಯ. ಚೆನ್ನಾಗಿ ಕಥೆ ಹೇಳಿದಾಗ ಎಲ್ಲರೂ ಕೂತು ನೋಡಬಹುದು. ಪುಟ್‌ಬಾಲ್ ಸುತ್ತು ಸುತ್ತುವ ಕಥೆಯಾಗಿದ್ದು, ಈ ತರದ ಕಥೆ ನಾನು ಕೇಳಿಲ್ಲ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಮುಂಬೈ ತೊರೆದ ಅನುರಾಗ್: ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೆ ಸಂಚಲನ ಮೂಡಿಸಿತ್ತು. ಬಾಲಿವುಡ್ ಚಿತ್ರರಂಗವನ್ನು ‘ಟಾಕ್ಸಿಕ್’ ಎಂದು ಕರೆದಿದ್ದಾರೆ. ಜತೆಗೆ ಮುಂಬೈ ತೊರೆಯುವ ಮಾತನಾಡಿದ್ದರು. ‘ನಾನು ಮಂಬೈ ತೊರೆದಿದ್ದೇನೆ. ಬಾಲಿವುಡ್ ಜನರಿಂದ ದೂರ ಇರಲು ಬಯಸುತ್ತೇನೆ. ಸದ್ಯ ಅಲ್ಲಿನ ವಾತಾವರಣ ಚೆನ್ನಾಗಿಲ್ಲ. ಎಲ್ಲರೂ 500 ರಿಂದ 800 ಕೋಟಿ ರೂಪಾಯಿ ಬಜೆಟ್ ಸಿನಿಮಾ ಮಾಡಲು ಮುಂದಾಗುತ್ತಿದ್ದಾರೆ. ಸೃಜನಶೀಲ ಒಳ್ಳೆಯ ಕಂಟೆಂಟ್‌ಗಳಿಗೆ ಜಾಗವಿಲ್ಲವಾಗಿದೆ’ ಎಂದಿದ್ದರು. ‘ನಾನು ಬಾಲಿವುಡ್ ತೊರೆಯುತ್ತಿಲ್ಲ. ನಾನು ಎಲ್ಲಿಯೂ ಇದ್ದರೂ, ಹಿಂದಿ ಸಿನಿಮಾ ಮಾಡುತ್ತೇನೆ’ ಎಂದು ಹೇಳಿದ್ದಾರೆ.