ಅಪಾರ್ಟ್​ಮೆಂಟ್​ನಿಂದ ಬಂತು ಮತ್ತೊಂದು ಹಾಡು

1
Published on

ಬೆಂಗಳೂರು: ಗುರುರಾಜ ಕುಲಕರ್ಣಿ ಇದೇ ಮೊದಲ ಬಾರಿಗೆ ಕಥೆ ಬರೆದು ನಿರ್ದೇಶಿಸಿರುವ 'ಅಮೃತ ಅಪಾರ್ಟ್ಮಮೆಂಟ್ಸ್' ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಗಿದಿದ್ದು, ನವೆಂಬರ್​ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಈ ಮಧ್ಯೆ, 'ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು ...' ಎಂಬ ಲಿರಿಕಲ್​ ಹಾಡು ಯೂಟ್ಯೂಬ್​ನ ಜಂಕಾರ್​ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿ, ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರತಂಡದಿಂದ ಬಿಡುಗಡೆಯಾಗುತ್ತಿರುವ ಎರಡನೇ ಹಾಡು ಇದಾಗಿದ್ದು, ಇದಕ್ಕೂ ಮುನ್ನ 'ನಾವು ಬಂದೇವ್​ ...' ಎನ್ನುವ ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಆ ಹಾಡು ಸಹ ಸಾಕಷ್ಟು ಜನಪ್ರಿಯವಾಗಿದ್ದು, ಈಗ ಎರಡನೆಯ ಹಾಡು ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವುದು ಚಿತ್ರದ ಬಗ್ಗೆ ಚಿತ್ರತಂಡಕ್ಕಿರುವ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.

'ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು ...' ಒಂದು ಪ್ರೇಮಗೀತೆಯಾಗಿದ್ದು, ಗಂಡ-ಹೆಂಡತಿಯ ಪ್ರೀತಿಯ ಕುರಿತದ್ದಾಗಿದೆ. ಗಂಡ-ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶವನ್ನು 'ಪ್ರೇಮಕವಿ' ಕಲ್ಯಾಣ್​ ತಮ್ಮ ಪದಗಳ ಮೂಲಕ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದು, ಎಸ್​.ಡಿ. ಅರವಿಂದ್​ ಸಂಗೀತ ಸಂಯೋಜಿಸಿದ್ದಾರೆ. ಈ ಯುಗಳ ಹಾಡಿಗೆ ವಾಣಿ ಹರಿಕೃಷ್ಣ ಮತ್ತು ಅಜಯ್​ ವಾರಿಯರ್​ ಧ್ವನಿ ನೀಡಿದ್ದಾರೆ.

'ಅಮೃತ ಅಪಾರ್ಟ್​ಮೆಂಟ್ಸ್​' ಚಿತ್ರದಲ್ಲಿ ತಾರಕ್​ ಪೊನ್ನಪ್ಪ, ಊರ್ವಶಿ ಗೋವರ್ಧನ, ಬಾಲಾಜಿ ಮನೋಹರ್​, ಸೀತಾ ಕೋಟೆ, ಮಾನಸ ಜೋಷಿ, ಸಂಪತ್​ಕುಮಾರ್​ ಮುಂತಾದವರು ನಟಿಸಿದ್ದಾರೆ. ಜಿ9 ಕಮ್ಯುನಿಕೇಷನ್ಸ್​ ಮೀಡಿಯಾ ಆಂಡ್​ ಎಂಟರ್​ಟೈನ್​ಮೆಂಟ್ಸ್​ ಬ್ಯಾನರ್​ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಅರ್ಜುನ್ ಅಜಿತ್​ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net