

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಮುಹೂರ್ತವಾಗಿ ಎರಡು ವರ್ಷಗಳಾಗಿವೆ. ಈ ಮಧ್ಯೆ, ಅಭಿಮಾನಿಗಳ ಒತ್ತಾಯದ ಮೇರೆಗೆ 'ಪವರ್ ಆಫ್ ಯೂಥ್' ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿತ್ತು. ಈ ಮಧ್ಯೆ, ಚಿತ್ರದ ಇನ್ನೊಂದು ಸಿಂಗಲ್ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ.
ಈ ಬಾರಿ 'ನೀನಾದೆ ನಾ ...' ಎಂಬ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲಾಗುತ್ತಿದ್ದು, ಪುನೀತ್ ರಾಜಕುಮಾರ್ ಮತ್ತು ಸಾಯೇಷಾ ಸೆಹಗಲ್ ಈ ಹಾಡಿನಲ್ಲಿ ಜತೆಯಾಗಿ ಕಾಣಿಸಿಕೊಂಡರೆ, ಎಸ್.ಎಸ್. ಥಮನ್ ಸಂಗೀತ ಸಂಯೋಜಿಸಿದ್ದಾರೆ.
ಈ ಹಾಡು ಡಿಸೆಂಬರ್ 25ರಂದು ಮಧ್ಯಾಹ್ನ 12.05ಕ್ಕೆಯೂಟ್ಯೂಬ್ನ ಹೊಂಬಾಳೆ ಮ್ಯೂಸಿಕ್ ಚಾನಲ್ನಡಿ ಬಿಡುಗಡೆಯಾಗಲಿದೆ. ಈ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವುದು ವಿಶೇಷ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, 'ಯುವರತ್ನ' ಚಿತ್ರವು ಈ ವರ್ಷ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಚಿತ್ರವು ತಡವಾಗಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.
'ಯುವರತ್ನ' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆಗೆ ಧನಂಜಯ್, ಸಯೇಷಾ ಸೆಹ್ಗಲ್, ದಿಗಂತ್, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್ ಆನಂದರಾಮ್. ಇನ್ನು ವಿಜಯ್ಕುಮಾರ್ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್ನಡಿ ನಿರ್ಮಾಣ ಮಾಡಿದ್ದಾರೆ.