ಮತ್ತೊಂದು ಮಠ; ಮಠಾಧೀಶ ಆದ ಗುರುಪ್ರಸಾದ್

Mata
Published on

ಬೆಂಗಳೂರು: ಕನ್ನಡದಲ್ಲಿ 16 ವರ್ಷಗಳ ಬಳಿಕ ಮತ್ತೊಮ್ಮೆ, ಮತ್ತೊಂದು ‘ಮಠ’ ಸಿದ್ಧವಾಗಿದೆ. 2006ರ ‘ಮಠ’ ನಿರ್ದೇಶಿಸಿದ್ದ ಗುರುಪ್ರಸಾದ್ ಈ ಹೊಸ ‘ಮಠ’ದಲ್ಲಿ ಮಠಾಧೀಶರಾಗಿದ್ದಾರೆ. ಜತೆಗೆ ಹಳೆಯ ‘ಮಠ’ದಲ್ಲಿದ್ದ ಸಾಧು ಕೋಕಿಲಾ, ತಬಲಾ ನಾಣಿ, ಮಂಡ್ಯ ರಮೇಶ್, ಇಲ್ಲೂ ಮುಂದುವರೆದಿದ್ದಾರೆ. ಚಿತ್ರದ ಕಥೆ ಬರೆಯುವ ಜತೆಗೆ ಸಂತೋಷ್ ನಾಯಕನಾಗಿಯೂ ನಟಿಸಿದ್ದು, ಅವರಿಗೆ ಕೊಡಗು ಮೂಲದ ಅಶ್ರತ್ ಮಲ್ಲಿಂಗಡ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ‘ವಾಸಂತಿ ನಲಿದಾಗ’, ‘ನೈಟ್ ಕರ್ಫ್ಯೂ’ ಮುಂತಾದ ಚಿತ್ರಗಳ ನಿರ್ದೇಶಕ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ.

ಹೊಸ ‘ಮಠ’ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್, ‘ಮನೆ ಕಟ್ಟುವುದು ಸುಲಭ, ಮಠ ಕಟ್ಟುವುದು ಕಷ್ಟ. ‘ಮಠ’ ಚಿತ್ರದ ಸಮಯದಲ್ಲಿ ಒಂದು ತಿಂಗಳ ಕಾಲ, ನಾನು ನಮ್ಮ ತಂಡದ ಜತೆ ಆರು ಸಾವಿರ ಕಿಲೋಮೀಟರ್ ಸುತ್ತಿದ್ದೆ. ‘ಮಠ 2’ ಮಾಡಲು ನನಗೇ ಭಯ. ಆಗ ಕಾಂಗ್ರೆಸ್ ಆಡಳಿತ ಇತ್ತು. ಅಂದಿನ ಪರಿಸ್ಥಿತಿಗಳೇ ಬೇರೆ ರೀತಿ ಇದ್ದವು. ಈಗ ಬಿಜೆಪಿ ಪಕ್ಷ ಆಡಳಿತದಲ್ಲಿದೆ. ಈಗಿನ ಸವಾಲುಗಳೇ ಬೇರೆ ರೀತಿ ಇವೆ. ಇಲ್ಲಿ ನಾನೊಬ್ಬ ಕಲಾವಿದನಷ್ಟೇ. ನಿರ್ದೇಶಕರು ಹೇಳಿದಂತೆ ನಟಿಸಿದ್ದೇನೆ’ ಎಂದರು. ಜತೆಗೆ ಸಾಧು ಕೋಕಿಲ ಅವರ ಜತೆ ಒಂದು ಸಿನಿಮಾ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಸಾಧು ಕೋಕಿಲ, ‘600-700 ಚಿತ್ರಗಳಲ್ಲಿ ನಟಿಸಿದ್ದೇನೆ. ನನಗೆ ಈ ಚಿತ್ರ ತುಂಬ ಸ್ಪೆಷಲ್. ಮಠದ ಸುತ್ತಮುತ್ತ ಕಥೆ ಇದ್ದರೂ, ಇದರ ಕಥಾವಸ್ತುನೇ ಬೇರೆ. ಇದರಲ್ಲಿ ಯಾರೂ ನಾಯಕರಿಲ್ಲ, ಎಲ್ಲ ಪಾತ್ರಗಳೂ ಕಥಾನಾಯಕರೇ. ನಾನು ಒಬ್ಬ ಸ್ವಾಮೀಜಿ ಪಾತ್ರದಲ್ಲಿ ನಟಿಸಿದ್ದೇನೆ. ಒಬ್ಬ ವ್ಯಕ್ತಿ ಹೇಗೆ ಒಳ್ಳೆಯ ಕೆಲಸ, ಗುಣಗಳ ಮೂಲಕ ಮಠಾಧೀಶನಾಗುತ್ತಾನೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ’ ಎಂದರು.

ಆ ಮಠದ ದುಡ್ಡು ಇನ್ನೂ ಬಂದಿಲ್ಲ!: ಇದೇ ಸಮಯದಲ್ಲಿ ‘ಮಠ’ ಚಿತ್ರದ ಸಂಭಾವನೆ ಇನ್ನೂ ದೊರೆಯದಿರುವ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ ನಿರ್ದೇಶಕ ಗುರುಪ್ರಸಾದ್, ‘ನಿರ್ವಪಕ ಕನಕಪುರ ಶ್ರೀನಿವಾಸ್ ಬನಶಂಕರಮ್ಮನ ಮೇಲಾಣೆ ಮಾಡಿ ಲಾಭದಲ್ಲಿ 10 ಪರ್ಸೆಂಟ್ ಕೊಡುತ್ತೇನೆ ಎಂದಿದ್ದರು. 2006ರಲ್ಲಿ ಸಿನಿಮಾ ಎಷ್ಟು ಹಣ ಮಾಡಿತ್ತು? ಅದರಲ್ಲಿ ಲಾಭವೆಷ್ಟು ಎಂಬುದು ಗೊತ್ತು. ಪಾರ್ವತಮ್ಮ ರಾಜಕುಮಾರ್ ಅವರು ನಾನು ಮಾತಾಡಿಸಿ ಹಣ ಕೊಡಿಸಲಾ ಎಂದಿದ್ದರು. ನಾನೂ ಕನಕಪುರದವನೇ. ಶ್ರೀನಿವಾಸ್ ಅವರ ಮನೆಯಿಂದ ಐದು ಮನೆ ದೂರದಲ್ಲೇ ನಾನೂ ಇದ್ದಿದ್ದು. ಅವರ ಇತಿಹಾಸ ಏನು ಅಂತ ಗೊತ್ತು. ನನಗೆ ಅಂತಲ್ಲ ಇನ್ನೂ ತುಂಬ ಜನರಿಗೆ ಹಣ ಕೊಟ್ಟಿಲ್ಲ’ ಎಂದು ಆರೋಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net