

ಆಮಿರ್ ಖಾನ್ ಸಿನಿಮಾ ಅಂದರೆ ಅಲ್ಲಿ ಕುತೂಹಲಕ್ಕೆ ಹೆಚ್ಚಿನ ಅವಕಾಶ ಇರುತ್ತದೆ. ಪ್ರತಿ ಸಿನಿಮಾದಲ್ಲಿ ಏನಾದರೊಂದು ಹೊಸತನ್ನು ನೀಡುವುದನ್ನೇ ಆಮಿರ್ ಕಾಯಕ ಮಾಡಿಕೊಂಡಿದ್ದಾರೆ. ಅದಕ್ಕೆ ಈ ಹಿಂದಿನ ಅವರ ಸಿನಿಮಾಗಳೇ ಕಾರಣ.
ಅದೇ ರೀತಿ ‘ಲಾಲ್ಸಿಂಗ್ ಛಡ್ಡಾ’ ಕೂಡ ಯಾವುದರಲ್ಲೂ ಕಮ್ಮಿ ಇಲ್ಲ! ಲುಕ್ ಮೂಲಕವೇ ಹೆಚ್ಚು ಗಮನ ಸೆಳೆದು, ನಿರೀಕ್ಷೆ ಮೂಡಿಸಿದ್ದರು. ಈಗ ಅದೇ ಚಿತ್ರದ ಮತ್ತೊಂದು ಅವತಾರ ಬಯಲಾಗಿದೆ. ಉದ್ದನೆಯ ತಲೆಗೂದಲು, ಗಡ್ಡಧಾರಿಯಾಗಿ ತಲೆಗೆ ಮಫ್ಲರ್ ಟೋಪಿ ಧರಿಸಿ ಎದುರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಅಭಿಮಾನಿಯೊಬ್ಬರ ಜತೆ ಕ್ಲಿಕ್ಕಿಸಿಕೊಂಡ ಫೋಟೋ ಇದಾಗಿದೆ. 1994ರಲ್ಲಿ ಹಾಲಿವುಡ್ನಲ್ಲಿ ತೆರೆಕಂಡಿದ್ದ, ‘ಫಾರೆಸ್ಟ್ ಗಂಪ್’ ಚಿತ್ರವನ್ನೇ ಸ್ಪೂರ್ತಿಯಾಗಿಸಿಕೊಂಡು ‘ಸೀಕ್ರೆಟ್ ಸೂಪರ್ಸ್ಟಾರ್’ ಸಿನಿಮಾ ನಿರ್ದೇಶಿಸಿದ್ದ ಅದ್ವೈತ್ ಚಂದನ್ ನಿರ್ದೇಶನದಲ್ಲಿ ‘..ಛಡ್ಡಾ’ ತಯಾರಾಗುತ್ತಿದೆ. ಕರೀನಾ ಕಪೂರ್, ಮೋನಾ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರಕ್ಕೆ ಆಮಿರ್ ಪ್ರೊಡಕ್ಷನ್ಸ್, ವಯಾಕಾಮ್ 18 ಸಂಸ್ಥೆ ಬಂಡವಾಳ ಹೂಡುತ್ತಿವೆ. -ಏಜೆನ್ಸೀಸ್