ಸಾಯಿಬಾಬ ಕುರಿತು ಕನ್ನಡದಲ್ಲಿ ಇನ್ನೊಂದು ಸಿನಿಮಾ; ಈ ಬಾರಿ ಮಕ್ಕಳೇ ಪಾತ್ರಧಾರಿಗಳು …

Sadguru
Published on

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು, ಬರೀ ಮಕ್ಕಳನ್ನೇ ಇಟ್ಟುಕೊಂಡು 'ಗಿರ್ಮಿಟ್​' ಎಂಬ ದೊಡ್ಡವರ ಚಿತ್ರವೊಂದನ್ನು ನಿರ್ದೇಶಿಸಿದ್ದು ನೆನಪಿರಬಹುದು. ಈ ಚಿತ್ರದ ನಾಯಕ-ನಾಯಕಿ ಪಾತ್ರ ಮಾಡಿದ ಹುಡುಗ-ಹುಡುಗಿಗೆ ಯಶ್​ ಮತ್ತು ರಾಧಿಕಾ ಪಂಡಿತ್​ ಧ್ವನಿ ಕೊಟ್ಟಿದ್ದರು.

ಈಗ್ಯಾಕೆ ಈ ವಿಷಯ ಎಂದರೆ, ಚಂದನವನದಲ್ಲಿ ಅಂಥದ್ದೇ ಇನ್ನೊಂದು ಪ್ರಯತ್ನವಾಗಿದೆ. ಶಿರಡಿ ಸಾಯಿಬಾಬ ಅವರ ಜೀವನವನ್ನಾಧರಿಸಿ ‘ಸದ್ಗುರು’ ಎಂಬ ಚಿತ್ರ ನಿರ್ಮಾಣವಾಗಿದ್ದು, ಈ ಚಿತ್ರದ ಎಲ್ಲಾ ಪಾತ್ರಗಳನ್ನು ಮಕ್ಕಳೇ ನಿರ್ವಹಿಸಿದ್ದಾರೆ. ಮಕ್ಕಳ ಮೂಲಕ ಶಿರಡಿ ಸಾಯಿಬಾಬ ಅವರ ಕಥಯನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವಾಗಿದ್ದು, ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿನು ಮನಸು ಸಂಗೀತವಿದೆ.

ಬರೀ ನಿರ್ದೇಶನವಷ್ಟೇ ಅಲ್ಲ, ಸಹನಾ ಆರ್ಟ್ಸ್ ಬ್ಯಾನರ್​ನಡಿ ಈ ಚಿತ್ರವನ್ನು ಅವರೇ ನಿರ್ಮಿಸಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಜನವರಿ 5ರಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ.

5ರಿಂದ 14 ವರ್ಷದ ಧಾರವಾಡದ ರಂಗಭೂಮಿ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಜನಾ ಗೋರ್ಪಡೆ ಸಾಯಿ ಬಾಬಾ ಪಾತ್ರ ನಿರ್ವಹಿಸಿದ್ದು, ದಿಗಂತ್ ತುಬ್ರಬುದ್ದಿ, ತುಳಸಿ ಮುಕಾಶಿ, ಸುಮಿತ್ ಭಜಂತ್ರಿ, ಸಹನಾ, ಸಂಕೇತ್ ಬಂಕಾಪುರ, ಸಾನ್ವಿ, ನಮನ್ ಕನವಳ್ಳಿ ಹಿರೇಮಠ್, ಆರಾದ್ಯ ರಜಪೂತ್, ಲಿತಿಕಾ ಯರಗಟ್ಟಿ ಸೇರಿದಂತೆ ಹಲವು ಮಕ್ಕಳು ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ. ಜೂನ್ ನಲ್ಲಿ ಚಿತ್ರೀಕರಣ ಆರಂಭಿಸಿ 30 ದಿನಗಳ ಕಾಲ ಧಾರವಾಡದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಈ ಹಿಂದೆ 'ನೇಗಿಲ ಯೋಗಿ' ಎಂಬ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಕ್ರಮಾದಿತ್ಯಗೆ ಚಿತ್ರ ಮಾಡಬೇಕೆಂಬ ಆಸಕ್ತಿ ಚಿಕ್ಕಂದಿನಿಂದ ಇತ್ತಂತೆ. 'ಸ್ವತಂತ್ರ ನಿರ್ದೇಶಕನಾಗಬೇಕು ಎಂದು ಬಹಳ ವರ್ಷಗಳಿಂದ ಅಂದುಕೊಂಡಿದ್ದೆ, ಈಗ ಆ ಕನಸು ‘ಸದ್ಗುರು’ ಚಿತ್ರದ ಮೂಲಕ ಈಡೇರಿದೆ' ಎಂದು ಹೇಳಿಕೊಳ್ಳುತ್ತಾರೆ.

ಸಾಯಿಬಾಬ ಪಾತ್ರಧಾರಿ ಸಂಜನಾ ಗೋರ್ಪಡೆ ಮಾತನಾಡಿ, 'ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆ ಇತ್ತು. ಆ ಕಾರಣಕ್ಕೆ ಅಭಿನಯ ಶಾಲೆ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆಯಾದೆ. ಆರಂಭದಲ್ಲಿ ಭಯ ಆಗ್ತಿತ್ತು. ನಿರ್ದೇಶಕರು, ಗುರುಗಳ ಸಹಕಾರದಿಂದ ಈ ಪಾತ್ರವನ್ನು ನಿರ್ವಹಿಸಿದ್ದೇನೆ' ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net