

ಬೆಂಗಳೂರು: ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಚಿತ್ರ ನಿರ್ಮಾಣ ಮಾಡಿ 14 ವರ್ಷಗಳೇ ಆಗಿದ್ದವು. 2008ರಲ್ಲಿ ಬಿಡುಗಡೆಯಾದ ‘ಮಿಂಚಿನ ಓಟ’ ಚಿತ್ರವೇ ಕೊನೆ. ಈಗ ಅವರು, 30 ವರ್ಷಗಳ ಹಿಂದೆ ತಾವೇ ನಿರ್ವಿುಸಿದ ‘ಬೆಳ್ಳಿ ಕಾಲುಂಗುರ’ ಎಂಬ ಶೀರ್ಷಿಕೆಯಡಿ ಇನ್ನೊಂದು ಹೊಸ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಾಟಾಳ್ ನಾಗರಾಜ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಬಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಈ ಹೊಸ ‘ಬೆಳ್ಳಿ ಕಾಲುಂಗರ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಎಚ್. ವಾಸು. ಚಿತ್ರದಲ್ಲಿ ಸಮರ್ಥ್ ಎಂಬ ಹೊಸ ಹುಡುಗ ನಾಯಕನಾದರೆ, ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ುಮಾರ್ ನಾಯಕಿಯಾಗಿದ್ದಾರೆ. ಗುರುಕಿರಣ್ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ ಮತ್ತು ಎಂ.ಎಸ್. ರಮೇಶ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ‘ಬೆಳ್ಳಿ ಕಾಲುಂಗರ’ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಎಚ್. ವಾಸು, ‘ಅದೇ ಶೀರ್ಷಿಕೆ ಇಟ್ಟುಕೊಂಡು ಇನ್ನೊಂದು ಚಿತ್ರ ಮಾಡುತ್ತಿದ್ದೇನೆ. ಇದೊಂದು ತ್ರಿಕೋನ ಪ್ರೇಮಕಥೆ. ನಾಯಕ-ನಾಯಕಿಯಾಗಿ ಸಮರ್ಥ್ ಮತ್ತು ಧನ್ಯಾ ನಟಿಸುತ್ತಿದ್ದಾರೆ. ಇನ್ನೊಂದು ನಾಯಕಿಯ ಪಾತ್ರವೂ ಇದೆ. ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಚಿತ್ರ. ಆ ಚಿತ್ರದ ಕೆಲವು ಎಳೆಗಳು ಲಿಂಕ್ ಆಗುತ್ತದೆ. ನಾಯಕ-ನಾಯಕಿ ಪ್ರೀತಿಸಿ ಸಮಸ್ಯೆಗಳು ಎದುರಾದಾಗ, ಆ ಚಿತ್ರದ ಪಾತ್ರಗಳು ಇಲ್ಲಿ ಬರುತ್ತವೆ. ಜತೆಗೆ ಹಂಪಿ ಸಹ ಇಲ್ಲೊಂದು ಪಾತ್ರ ವಹಿಸುತ್ತದೆ. ಮೈಸೂರು, ಸಕಲೇಶಪುರ, ಹಂಪಿ ಮುಂತಾದ ಕಡೆ ಚಿತ್ರೀಕರಣ ನಡೆಯುತ್ತಿದೆ. ಆ ಚಿತ್ರದಲ್ಲಿ ಅಭಿನಯಿಸಿದ್ದ ತಾರಾ, ಅವಿನಾಶ್, ಗುರುದತ್ ಮತ್ತು ಶಿವಕುಮಾರ್ ಇಲ್ಲೂ ಮುಂದುವರೆಯುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ.
ಈ ಚಿತ್ರದಲ್ಲಿ ಫಾರಿನ್ನಲ್ಲಿ ಓದಿಬಂದಿರುವ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಧನ್ಯಾ. ‘ನಾನು ಈ ಚಿತ್ರದಲ್ಲಿ ಲಂಡನ್ನಲ್ಲಿ ಓದಿ ಬಂದಿರುವ ಹುಡುಗಿಯಾಗಿದ್ದರೂ, ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಸಮರ್ಥ್ ಜತೆಗೆ ಫೋಟೋಶೂಟ್ ಸಹ ಆಗಿದೆ. ನಾವಿಬ್ಬರೂ ಒಳ್ಳೆಯ ಜೋಡಿ ಎಂದನಿಸಿತು. ಅವರಿಗಿದು ಮೊದಲ ಚಿತ್ರ, ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.