ಪ್ರೀತಿ ಮಾಡೋರಿಗೆ ಡ್ರಗ್ಸ್​ ಕೊಡೋಕೆ ಹೇಗೆ ಸಾಧ್ಯ? ಅಂಕಿತಾ ಲೋಖಂಡೆ ಪ್ರಶ್ನೆ

Ankitha - Rhea - Final
Published on

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅಸಹಜ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡದವರು ನಟಿ ರಿಯಾ ಚಕ್ರವರ್ತಿ ಅವರನ್ನ ಅರೆಸ್ಟ್​ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ, ನಟಿ ಹಾಗೂ ಸುಶಾಂತ್​ ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಖಂಡೆ ಈ ಪ್ರಕರಣದ ಬಗ್ಗೆ ಮಾತನಾಡ್ಡಿದ್ದಾರೆ. ಈ ಪ್ರಕರಣದಲ್ಲಿ ರಿಯಾ ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿರುವ ಅವರು, 'ಸುಶಾಂತ್​ ಡಿಪ್ರೆಶನ್​ಗೆ ಒಳಗಾಗಿದ್ದರಿಂದ ಅವರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಅವರ ವೈದ್ಯರ ಜತೆ ಸಂಪರ್ಕದಲ್ಲಿದ್ದೆ ಎಂದು ರಿಯಾ ಒಂದು ಕಡೆ ಹೇಳುತ್ತಾರೆ. ಇನ್ನೊಂದು ಕಡೆ, ಸುಶಾಂತ್​ಗೆ ಡ್ರಗ್ಸ್​ ಚಟವಿದ್ದ ಕಾರಣ, ಡ್ರಗ್ಸ್​ ಕೊಡಿಸಿದ್ದಾಗಿ ಹೇಳುತ್ತಾರೆ. ಯಾರಾದರೂ ತಾವು ತುಂಬಾ ಪ್ರೀತಿಸುವವರನ್ನು ಹಾಗೆ ಡ್ರಗ್​ ತೆಗೆದುಕೊಳ್ಳುವುದಕ್ಕೆ ಬಿಡುತ್ತಾರಾ? ಅದರಲ್ಲೂ ಸುಶಾಂತ್​ ಅವರ ಮಾನಸಿಕ ಆರೋಗ್ಯ ಸರಿಯಿಲ್ಲ ಎನ್ನುವಾಗ, ಅವರಿಗೆ ಡ್ರಗ್ಸ್​ ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾರಾ? ಇಂತಹ ಕೆಲಸ ಯಾರೂ ಮಾಡುವುದಿಲ್ಲ. ಆಕೆ ಹಾಗೆ ಮಾಡಿದ್ದರೆ, ಅದು ಬೇಜವಾಬ್ದಾರಿತನವಲ್ಲದೆ ಮತ್ತಿನ್ನೇನು?' ಎಂದು ಅವರು ಪ್ರಶ್ನಿಸಿದ್ದಾರೆ.

ಈ ಕುರಿತು ಇನ್ನುಷ್ಟು ಮಾತನಾಡಿರುವ ಅಂಕಿತಾ, 'ಸುಶಾಂತ್​ ಅವರ ಮಾನಸಿಕ ಸ್ಥಿತಿಯ ಬಗ್ಗೆ ಅವರ ಮನೆಯವರಿಗೆ ರಿಯಾ ಹೇಳಿದ್ದರಂತೆ. ಆದರೆ, ಡ್ರಗ್ಸ್​ ವ್ಯಸನದ ಬಗ್ಗೆ ಯಾಕೆ ಹೇಳಿರಲಿಲ್ಲ. ಬಹುಶಃ ಆಕೆ ಸಹ ಡ್ರಗ್ಸ್​ ತೆಗೆದುಕೊಳ್ಳುವುದು ಎಂಜಾಯ್​ ಮಾಡುತ್ತಿದ್ದರಿಂದ, ಈ ವಿಷಯವನ್ನು ಯಾರಿಗೂ ಹೇಳದೆ ಮುಚ್ಚಿಟ್ಟರು. ಈಗ ಅದೇ ಅವರಿಗೆ ಮುಳುವಾಗಿದೆ. ಅದಕ್ಕೇ ಕರ್ಮ ಎನ್ನುತ್ತಾರೆ' ಎಂದು ಅಂಕಿತಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net