

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಇದಕ್ಕೂ ಮುನ್ನ, ಈ ಪ್ರಕರಣವನ್ನು ಕೈಗೆತ್ತಿಕೊಂಡ ಜಾರಿ ನಿರ್ದೇಶನಾಲಯವು (ಇಡಿ), ಸುಶಾಂತ್ ಸಿಂಗ್ ಅವರ ಬ್ಯಾಂಕ್ ಖಾತೆಗಳಿಂದ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರು 15 ಕೋಟಿಗೂ ಹೆಚ್ಚು ಹಣ ತೆಗೆದಿದ್ದರು ಎಂದು ಅನುಮಾನ ವ್ಯಕ್ತಪಡಿಸಿತ್ತು.
ಈಗ ಇಡಿ ಕಣ್ಣು ಸುಶಾಂತ್ ಅವರ ಮೊದಲ ಗರ್ಲ್ಫ್ರೆಂಡ್ ಅಂಕಿತಾ ಲೋಖಂಡೆ ಮೇಲೂ ಬಿದ್ದಿರುವ ಹಾಗಿದೆ. ಇಡಿನ ಅಧಿಕಾರಿಯೊಬ್ಬರು, ಅಂಕಿತಾ ವಾಸಿಸುತ್ತಿದ್ದ ಫ್ಲಾಟ್ನ ಪ್ರತಿ ತಿಂಗಳ ಈಕ್ವಲ್ ಮಂಥ್ಲಿ ಇನ್ಸ್ಟಾಲ್ಮೆಂಟ್ನ್ನು (ಇ.ಎಂ.ಐ) ಸುಶಾಂತ್ ಅವರೇ ಕಟ್ಟುತ್ತಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಫ್ಲಾಟ್ ಸಹ ಸುಶಾಂತ್ ಅವರ ಹೆಸರಿನಲ್ಲಿ ಇತ್ತು ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಂಕಿತಾ, ತಾವು ವಾಸಿಸುತ್ತಿರುವ ಫ್ಲಾಟ್ನ ರಿಜಿಸ್ಟ್ರೇಶನ್ ಮಾಹಿತಿಗಳನ್ನು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದೇ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳ ಇ.ಎಂ.ಐ ಕಟ್ಟುತ್ತಿರುವುದಾಗಿ ಅವರು ಹೇಳಿದ್ದು, ಅದಕ್ಕೆ ಪೂರಕವಾದ ದಾಖಲೆಗಳನ್ನು ಸಹ ಒದಗಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, 'ನನ್ನ ಫ್ಲಾಟ್ನ ಇ.ಎಂ.ಐ ಸುಶಾಂತ್ ಭರಿಸುತ್ತಿದ್ದರು ಎಂದು ಕೆಲವು ಕಡೆ ಸುದ್ದಿಯಾಗುತ್ತಿದೆ. ಸುಶಾಂತ್ ವಿಷಯದಲ್ಲಿ ನಾನು ಮೊದಲಿನಿಂದಲೂ ಪಾರದರ್ಶಕವಾಗಿದ್ದೇನೆ ಮತ್ತು ಹಾಗೆಯೇ ಮುಂದುವೆರೆಯುತ್ತೇನೆ. ಅದೇ ಕಾರಣಕ್ಕೆ ನನ್ನ ಫ್ಲಾಟ್ನ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಮತ್ತು ನನ್ನ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಇಲ್ಲಿ ನೀಡಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಬರ್ಕ್ಲಿ’ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಬಿಡುಗಡೆ …
ಹಾಗೆಯೇ ಈ ವಿಷಯವಾಗಿ ತಾನು ಹೆಚ್ಚೇನೂ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ. ಅಂಕಿತಾ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಸುಶಾಂತ್ ಅವರ ಸಹೋದರಿ ಶ್ವೇತಾ ಸಹ ಅಂಕಿತಾಗೆ ತಮ್ಮ ಸಪೋರ್ಟ್ ನೀಡಿದ್ದಾರೆ. 'ಅಂಕಿತಾ ನೀನೊಬ್ಬ ಸ್ವತಂತ್ರ ಮಹಿಳೆ ಮತ್ತು ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಅವರು ಕಮೆಂಟ್ ಮಾಡಿದ್ದಾರೆ. ಇನ್ನು ಸುಶಾಂತ್ ಅವರ ಸ್ನೇಹಿತ ಮಹೇಶ್ ಶೆಟ್ಟಿ, 'ಅಂಕಿತಾ ನೀನು ಈ ವಿಷಯವಾಗಿ ಸ್ಪಷ್ಟೀಕರಣ ನೀಡುವ ಅವಶ್ಯಕತೆಯೇ ಇಲ್ಲ. ನೀನೇನು ಎಂದು ನಮಗೆ ಚೆನ್ನಾಗಿ ಗೊತ್ತಿದೆ' ಎಂದು ಹೇಳಿದ್ದಾರೆ.