ಶೂಟಿಂಗ್​ ಬಿಡುವಿನ ವೇಳೆ ಸ್ನಾನಕ್ಕೆಂದು ಹೋದ ಮಲಯಾಳಂ ಖ್ಯಾತ ನಟ ದುರಂತ ಸಾವು!

Anil nedumangad
Published on

ಕೊಚ್ಚಿ: ಮಲಯಾಳಂನ ಖ್ಯಾತ ನಟ ಅನಿಲ್ ನೆಡುಮಂಗಾಡ್,​ ಡ್ಯಾಂ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ. ಕೇರಳದ ತೊಡುಪುಳದಲ್ಲಿರುವ ಮಲಂಕರ ಡ್ಯಾಂನಲ್ಲಿ ಸ್ನಾನಕ್ಕೆಂದು ಸ್ನೇಹಿತರೊಟ್ಟಿಗೆ ತೆರಳಿದ್ದಾಗ ಅವಘಡ ಸಂಭವಿಸಿದೆ.

ಅಯ್ಯಪನುಮ್​ ಕೋಶಿಯುಮ್​, ಕಮಟ್ಟಿಪಾದಮ್​ ಮತ್ತು ಪಾವಡ ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತರಾಗಿದ್ದ ಅನಿಲ್ ನೆಡುಮಂಗಾಡ್​, ತಮ್ಮ ಮುಂದಿನ ಜೊಜು ಜಾರ್ಜ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೇ ಚಿತ್ರದ ಶೂಟಿಂಗ್​ ತೊಡುಪುಳದಲ್ಲಿ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಡ್ಯಾಂಗೆ ತೆರಳಿದ್ದರು. ಸ್ನಾನ ಮಾಡುವಾಗ ನೀರಿನ ಹರಿವು ಹೆಚ್ಚಾಗಿ ಅನಿಲ್​ ನೀರುಪಾಲಾಗಿದ್ದಾರೆ.

ಆ್ಯಂಕರ್​ ಮತ್ತು ನಿರ್ಮಾಪಕನಾಗಿ ಆರಂಭದಲ್ಲಿ ಹೆಸರು ಮಾಡಿದ್ದ ಅನಿಲ್​, 2014ರಲ್ಲಿ ಜಾನ್​ ಸ್ಟೀವ್​ ಲೋಪೆಜ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.​ ಬಳಿಕ ಪಾವಡ ಪಾದಮ್​, ಕಿಸ್ಮತ್​ ಪರೋಲ್​ ಮತ್ತು ಅಯ್ಯಪ್ಪನುಮ್​ ಕೋಶಿಯುಮ್​ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಒಳ್ಳೆಯ ಹೆಸರು ಗಳಿಸಿದ್ದರು. ಅನಿಲ್​, ಕೊನೆಯದಾಗಿ ಪಾಪಮ್​ ಚೆಯ್ಯಥಾವರ್​ ಕಲ್ಲೇರಿಯತ್ತೆ ಚಿತ್ರದಲ್ಲಿ ನಟಿಸಿದ್ದು, ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.

ಅನಿಲ್​ ಸಾವಿಗೆ ಮಲಯಾಳಂ ಸಿನಿಮಾ ಇಂಡಸ್ಟ್ರಿಯ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net