

ಬೆಂಗಳೂರು : ಅದಿತಿ ಪ್ರಭುದೇವ ಸದ್ಯ ಸಾಲುಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸದೊಂದು ಚಿತ್ರದಲ್ಲಿ ಇದುವರೆಗೂ ಮಾಡದ ವಿಶೇಷ ಪಾತ್ರವೊಂದರಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಅದೇ ‘ಆನ’! ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯಲ್ಲಿ ‘ಆನ’ ಚಿತ್ರ ಮೂಡಿಬಂದಿದೆ. ಫ್ಯಾಂಟಸಿ ಮತ್ತು ಹಾರರ್ ಅಂಶಗಳನ್ನೇ ಪ್ರಮುಖವಾಗಿಟ್ಟುಕೊಂಡು, ಅಷ್ಟೇ ಕೌತುಕಮಯವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ ನಿರ್ದೇಶಕ ಮನೋಜ್ ಪಿ, ನಡಲುಮನೆ.
ಹಾಗಾದರೆ ಏನಿದು ‘ಆನ’? ಅದನ್ನು ಸ್ವತಃ ಅದಿತಿಯೇ ಹೇಳಿಕೊಂಡಿದ್ದಾರಿಲ್ಲಿ. ‘ನಿರ್ದೇಶಕರು ಬಂದು ಲೇಡಿ ಸೂಪರ್ ಹೀರೋಗೆ ಸಂಬಂಧಿಸಿದ ಸಿನಿಮಾ ಅಂದ ತಕ್ಷಣ ಅದರಲ್ಲೇನೋ ವಿಶೇಷತೆ ಇದೆ ಎನಿಸಿತು. ಸರಣಿ ರೂಪದಲ್ಲಿಯೂ ಬರಲಿದೆ ಎಂದಾಗ ಮತ್ತಷ್ಟು ಖುಷಿಯಾಗಿತ್ತು. ಅಂದಹಾಗೆ, ಇಲ್ಲಿ ಆನ ಎಂದರೆ ಅರ್ನ್ಯಘ. ಅದು ನನ್ನ ಪಾತ್ರದ ಹೆಸರು. ಇಲ್ಲಿಯವರೆಗೂ ನಾನು ಮಾಡದ ಪಾತ್ರವಿದು. ಇಂಥ ಪಾತ್ರ ಸಿಕ್ಕಿದ್ದಕ್ಕೆ ನಿಜಕ್ಕೂ ನಾನು ಅದೃಷ್ಟವಂತೆ’ ಎಂದು ಹೇಳಿಕೊಳ್ಳುತ್ತಾರವರು.
ಅದಿತಿ ಜತೆಗೆ ಸಮರ್ಥ, ವಿಕಾಸ್, ಕಾರ್ತಿಕ್ ಮತ್ತು ವರುಣ್ ಪ್ರಮುಖ ಪಾತ್ರದಲ್ಲಿದ್ದಾರೆ. ‘ಚೂರಿಕಟ್ಟೆ’ ಸಿನಿಮಾ ಮಾಡಿದ್ದ ಪ್ರೇರಣಾ ‘ಆನ’ದಲ್ಲಿಯೂ ನಟಿಸಿದ್ದಾರೆ. ಉದಯ್ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದು, ವಿಜೇತ್ ಚಂದ್ರ ಸಂಕಲನ ಮಾಡುತ್ತಿದ್ದಾರೆ. ಸದ್ಯ ಇನ್ನೆರಡು ದಿನದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಉಳಿಸಿಕೊಂಡಿರುವ ತಂಡ, ಶೀಘ್ರದಲ್ಲಿ ಅದನ್ನು ಮುಗಿಸಿಕೊಳ್ಳಲಿದೆ. ಹೊಸಬರ ಈ ಪ್ರಯತ್ನಕ್ಕೆ ಯೂಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಪೂಜಾ ವಸಂತ್ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.