

‘ಗರಂ ಹವಾ’, ‘ಬರ’, ‘ಕನ್ನೇಶ್ವರ ರಾವ’ ಮುಂತಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿರುವ ಕನ್ನಡದ ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಅವರ ಹುಟ್ಟುಹಬ್ಬ ಇಂದು (ಜುಲೈ 06). 90 ವರ್ಷ ಮುಗಿಸಿ, 91ನೇ ವರ್ಷಕ್ಕೆ ಕಾಲಿಡುತ್ತಿರುವ ಸತ್ಯು, ಇದುವರೆಗೂ ನಿರ್ದೇಶಿಸಿರುವ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ಹಲವು ಕಾಲ ಕಾಡುವಂತಹ ಚಿತ್ರಗಳನ್ನು ಕೊಟ್ಟವರು. ಅವರ ಜತೆಗೆ ಕೆಲಸ ಮಾಡಿರುವ, ಅವರನ್ನು ಬಹಳ ಹತ್ತಿರದಿಂದ ಕಂಡಿರುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ಜತೆಗೆ ಸಾಕಷ್ಟು ಒಳ್ಳೆಯ ಕ್ಷಣಗಳನ್ನು ಕಳೆದಿರುವ ಹಿರಿಯ ನಟ ಅನಂತ್ ನಾಗ್ ಅವರು ತಮ್ಮ ಮತ್ತು ಸತ್ಯು ಅವರ ಬಾಂಧವ್ಯದ ಕುರಿತಾಗಿ ಇಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗೆ ಸತ್ಯು ಅವರ ಮಗಳು ಶೈಲಿ ಒಂದು ಪತ್ರ ಕಳಸಿದ್ದಳು. ಆಕೆ ನಾನು ಎತ್ತಿ ಆಡಿಸಿದ ಕೂಸು. ‘ಅಪ್ಪ 91ಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದಲ್ಲಿ ನೀವಿರಬೇಕು ...’ ಎಂದು ಆ ಪತ್ರದಲ್ಲಿತ್ತು. ಅದನ್ನು ನೋಡಿ, ಸತ್ಯು ಅವರಿಗೆ ಅಷ್ಟೊಂದು ವಯಸ್ಸಾಯಿತಾ ಎಂದನಿಸಿತು.
ಹಲವು ವರ್ಷಗಳ ಹಿಂದೆ ಶೈಲಿ ತರಹ ಸತ್ಯು ಸಹ ನನಗೊಂದು ಪತ್ರ ಕಳಿಸಿದ್ದರು. ಆಗ ನಾನು ಮುಂಬೈನಲ್ಲಿದ್ದೆ. ಅಲ್ಲಿನ ಜಹಾಂಗೀರ್ ಆರ್ಟ್ ಗ್ಯಾಲರಿಗೆ ಬಂದು ನೋಡಿ ಎಂದು ಸಂದೇಶ ಕಳಿಸಿದ್ದರು. ಅಷ್ಟರಲ್ಲಾಗಲೇ ಅವರು ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ‘ಗರಂ ಹವಾ’ದಂತಹ ಚಿತ್ರ ಮಾಡಿದ್ದರು. ಸತ್ಯು ಮತ್ತು ಅವರ ಪತ್ನಿ ಶಮಾ ಝೈದಿ ಅವರ ಬಗ್ಗೆ ಸಾಕಷ್ಟು ಕೇಳಿದ್ದೆ. ನಾನೋ ಆಗಿನ್ನು ಹೊಸಬ. ‘ಸಂಕಲ್ಪ’, ‘ಅಂಕುರ್’ ಮುಂತಾದ ಬೆರಳಣಿಕೆಯಷ್ಟು ಚಿತ್ರಗಳಲ್ಲಷ್ಟೇ ನಟಿಸಿದ್ದೆ. ಅವರನ್ನು ಹುಡುಕಿಕೊಂಡು ಹೋಗಿ, ಮಾತಾಡಿಸಿದೆ. ಅವರು ಹೇಗೋ, ಏನೋ ಅಂತ ಬಹಳ ನರ್ವಸ್ ಆಗಿದ್ದೆ. ನನ್ನ ಹೆದರಿಕೆ ಅವರಿಗೆ ಅರ್ಥವಾಗಿರಬೇಕು. ಒಮ್ಮೆ ಸ್ಮೈಲ್ ಮಾಡಿ, ತುಂಬಾ ಆಪ್ತತೆಯಿಂದ ಮಾತನಾಡಿದರು. ಅವರು ಮೆಲ್ಲನೆ ಮಾತನಾಡುವ ಶೈಲಿ ನನಗೆ ಖುಷಿ ಕೊಟ್ಟಿತು.
ಅಲ್ಲಿಂದ ನಮ್ಮ ಗೆಳೆತನ ಪ್ರಾರಂಭವಾಯಿತು. ಅವರ ನಿರ್ದೇಶನದ ‘ಕನ್ನೇಶ್ವರ ರಾಂ’ ಚಿತ್ರದಲ್ಲಿ ನಾನು ನಟಿಸಿದೆ. ಸತ್ಯು ಅವರು ಎಡಪಂಥೀಯ ಚಳವಳಿಯಲ್ಲಿ ಗುರುತಿಸಿಕೊಂಡವರು. ಅವರಿಗೆ ಅವರದ್ದೇ ಆದ ಕೆಲವು ಸ್ಪಷ್ಟ ನಿಲುವುಗಳಿವೆ. ಆದರೆ, ‘ಕನ್ನೇಶ್ವರ ರಾಮ’ ಅವರ ಯೋಚನೆ ಮತ್ತು ನಿಲುವುಗಳಿಗೆ ಬಹಳ ವಿಭಿನ್ನವಾದ ಚಿತ್ರವಾಗಿತ್ತು. ಒಬ್ಬ ಡಕಾಯಿತನ ಕುರಿತಾದ ಆ ಚಿತ್ರ ಸಾಕಷ್ಟು ಹೆಸರು ಮಾಡಿತ್ತು. ಆ ನಂತರ ‘ಚಿತೆಗೂ ಚಿಂತೆ’ ಎಂಬ ಇನ್ನೊಂದು ವಿಭಿನ್ನ ಚಿತ್ರ ಮಾಡಿದರು. ಅದರಲ್ಲಿ ನಾನಿರಲಿಲ್ಲ.
ಇದಾಗಿ ಕೆಲವು ಸಮಯದ ನಂತರ ಯು.ಆರ್. ಅನಂತಮೂರ್ತಿ ಅವರ ‘ಬರ’ ಕಥೆಯನ್ನು ಚಿತ್ರ ಮಾಡುವುದಕ್ಕೆ ಮುಂದಾದರು. ಅದು ಕನ್ನಡದ ಮಟ್ಟಿಗೆ ಮೊದಲ ಪೊಲಿಟಿಕಲ್ ಚಿತ್ರ. ಅದಕ್ಕೂ ಮುನ್ನ ಯಾರೂ ರಾಜಕೀಯದ ಕುರಿತಾದ ಚಿತ್ರ ಮಾಡಿರಲಿಲ್ಲ. ಯಾರೂ ಮಾಡದ ಪ್ರಯತ್ನಕ್ಕೆ ಕೈ ಹಾಕಿದ್ದರು ಸತ್ಯು. ಚಿತ್ರ ಚೆನ್ನಾಗಿ ಮೂಡಿಬಂತು. ಆದರೆ, ವಿತರಕರು ಸಿಕ್ಕಿರಲಿಲ್ಲ. ಕೊನೆಗೆ ನಾನೇ ಬಿಡುಗಡೆ ಮಾಡಿಸಿದೆ. ಚಿತ್ರ ನೂರು ದಿನ ಓಡಿತ್ತು. ಆ ನಂತರ ‘ಬರ’ ಚಿತ್ರದ ಹಿಂದಿ ವರ್ಷನ್ ‘ಸೂಖಾ’ ತಯಾರಾಯಿತು. ಆದರೆ, ಬಿಡುಗಡೆಯಾಗಲಿಲ್ಲ. ಕೊನೆಗೆ ದೂರದರ್ಶನಕ್ಕೆ ಕೊಡಬೇಕಾಯಿತು.
ಇದಾಗಿ ಕೆಲವು ವರ್ಷಗಳ ನಂತರ ದೂರದರ್ಶನದಿಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ‘ಚಿಕವೀರ ರಾಜೇಂದ್ರ’ ಕಾದಂಬರಿಯನ್ನು ಧಾರಾವಾಹಿಯನ್ನಾಗಿ ಮಾಡಿಕೊಡುವ ಆರ್ ಸಿಕ್ಕಿತು. ಅವರು ‘ಅಂತಿಮ್ ರಾಜ’ ಹೆಸರಿನಲ್ಲಿ 52 ಎಪಿಸೋಡುಗಳ ಧಾರಾವಾಹಿ ಮಾಡಿದರು. ಅದರಲ್ಲಿ ನಾನೇ ಚಿಕವೀರ ರಾಜೇಂದ್ರರ ಪಾತ್ರ ಮಾಡಿದೆ. ಚಿತ್ರಕಥೆ, ಕಾಸ್ಟೃಊಮ್ ಮತ್ತು ಏಸ್ತೆಟಿಕ್ಸ್‌ಗೆ ಸತ್ಯು ಅವರು ಕೊಡುವ ಗಮನವನ್ನು ನೋಡಿ ನಿಜಕ್ಕೂ ಅಚ್ಚರಿ ಆಯ್ತು.
ಇನ್ನು ಈ ಧಾರಾವಾಹಿಯ ಚಿತ್ರೀಕರಣ ಸಂದರ್ಭದಲ್ಲಿ ನಾನು ಬಹಳ ನರ್ವಸ್ ಆಗಿದ್ದೆ. ಅದಕ್ಕೆ ಕಾರಣ, ನಾನು ‘ಬೆಕೆಟ್’ ಚಿತ್ರದ ದೊಡ್ಡ ಅಭಿಮಾನಿ. ಸಾಕಷ್ಟು ಬಾರಿ ನೋಡಿದ್ದೇನೆ. ಪಾತ್ರ ಮಾಡುವಾಗ, ಬೆಕೆಟ್ ಪಾತ್ರವೇ ನನ್ನ ತಲೆಯಲ್ಲಿತ್ತು. ನಾನು ಅದೇ ತರಹ ಮಾಡುತ್ತಿದ್ದೇನಾ ಎಂದನಿಸಿ, ‘ಹೇಗೆ ಬಂದಿದೆ ...’ ಎಂದು ಪದೇಪದೇ ಕೇಳುತ್ತಿದ್ದೆ. ನನ್ನ ಚಡಪಡಿಕೆ ಗಮನಿಸಿದ ಸತ್ಯು ಹತ್ತಿರ ಬಂದು, ‘ಏನು ಸಮಸ್ಯೆ?’ ಅಂತ ಕೇಳಿದರು. ನಾನು ನನ್ನ ಸಮಸ್ಯೆ ಹೇಳಿಕೊಂಡೆ. ಅವರು ನನ್ನನ್ನು ಕೂಡಿಸಿಕೊಂಡು ಕ್ರಮೇಣ ಬ್ರೈನ್‌ವಾಷ್ ಮಾಡಿದರು. ‘ಮೊದಲು ಆ ಪಾತ್ರವನ್ನು ತಲೆಯಿಂದ ತೆಗೆದು ಹಾಕು. ಅದು ಬೇರೆ, ಇದು ಬೇರೆ ...’ ಎಂದು ಅರ್ಥ ಮಾಡಿಸಿದರು. ನನಗೆ ಬಹಳ ಖುಷಿಕೊಟ್ಟ ಪಾತ್ರ ಅದು. ಆದರೆ, ಕಾರಣಾಂತರಗಳಿಂದ ಆ ಧಾರಾವಾಹಿ ಪ್ರಸಾರವಾಗಲಿಲ್ಲ.
ಅದಾಗಿ ಬಹಳ ವರ್ಷಗಳ ನಂತರ ಸತ್ಯು, ‘ಇಜ್ಜೋಡು’ ಎಂಬ ಚಿತ್ರ ಮಾಡಿದರು. ಈ ಬಾರಿ ದೇವದಾಸಿಯ ಕಥೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಈ ಬಾರಿಯೂ ಅವರು ಸ್ಕ್ರಿಪ್ಟ್, ಚೆಕ್ ಮತ್ತು ಒಂದು ಪತ್ರವನ್ನು ಕಳುಹಿಸಿದ್ದರು. ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡಬೇಕು ಎಂದು ಹೇಳಿದ್ದರು. ಆದರೆ, ನನಗೆ ಆ ಪಾತ್ರ ಯಾಕೋ ಸರಿ ಹೋಗಲಿಲ್ಲ. ತಂದೆ ಇದ್ದೂ, ಮಗಳು ದೇವದಾಸಿ ಆಗುತ್ತಾಳೆ ಎನ್ನುವ ವಿಷಯ ಮನಸ್ಸಿಗೆ ಒಪ್ಪಲಿಲ್ಲ. ಹಾಗಾಗಿ ಅವೆಲ್ಲವನ್ನೂ ಸತ್ಯು ಅವರಿಗೆ ವಾಪಸ್ಸು ಕಳಿಸಿದೆ. ಆಮೇಲೆ ಅವರಿಂದ ಮತ್ತೊಂದು ಚೀಟಿ ಬಂತು. ‘ನೀವು ಮಾಡಿದ್ದರೆ ಬೇರೆ ರೀತಿಯೇ ಇರೋದು ...’ ಅಂತ ಬರೆದಿದ್ದರು. ಆದರೆ, ನಾನು ಆ ಪಾತ್ರ ಮಾಡಿಲ್ಲ. ಆ ಬಗ್ಗೆ ನನಗೆ ಇನ್ನೂ ಪಾಪಪ್ರಜ್ಞೆ ಇದೆ. ಅವರು ಮಾತ್ರ ಔದಾರ್ಯದಿಂದ ಆ ವಿಷಯವನ್ನು ಅಲ್ಲಿಗೇ ಬಿಟ್ಟರು.
ಇದನ್ನೂ ಓದಿ: ಸುಶಾಂತ್ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್ ಫಿಕ್ಸ್..
ಸತ್ಯು ಅವರಿಗೆ ಸಿಗಬೇಕಾದ ಮಾನ್ಯತೆ ಅದ್ಯಾಕೋ ಸಿಗಲೇ ಇಲ್ಲ. ಅವರ ಚಿತ್ರಗಳಿಗೆ ಹಲವು ಪ್ರಶಸ್ತಿಗಳು ಸಿಕ್ಕಿರಬಹುದು. ಆದರೆ, ಅವರ ಕಠಿಣ ರಾಜಕೀಯ ನಿಲುವುಗಳಿಂದ ಅವರಿಗೆ ಸಿಗಬೇಕಾಗಿದ್ದು ಸಿಗಲಿಲ್ಲ ಎಂದನಿಸುತ್ತದೆ. ಅವರು ನಿಲುವುಗಳೇನೇ ಇದ್ದರೂ, ಬೇರೆಯವರ ನಿಲುವುಗಳ ಬಗ್ಗೆ ಅವರು ಮಾತಾಡುತ್ತಿರಲಿಲ್ಲ. ನಾನು ರಾಜಕೀಯ ಪ್ರವೇಶಿಸುವ ಸಮಯದಲ್ಲಿ, ‘ನಿಮ್ಮ ನಂಬಿಕೆ ಏನಾದರೂ ಇರಲಿ. ನಿಮ್ಮಂಥವರು ರಾಜಕೀಯಕ್ಕೆ ಬರಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ’ ಎಂದು ಪ್ರೋತ್ಸಾಹ ನೀಡಿದ್ದರು. ಹಾಗೆಯೇ ರಾಜಕೀಯದ ಜತೆಗೆ ಎಕನಾಮಿಕ್ಸ್ ಚೆನ್ನಾಗಿ ಸ್ಟಡಿ ಮಾಡಿ ಎಂದು ಸಲಹೆ ನೀಡಿದ್ದರು.
ಐದು ವರ್ಷಗಳ ಹಿಂದೆ ಧಾರವಾಡದ ಸಭೆಯೊಂದರಲ್ಲಿ ಭೇಟಿಯಾಗಿದ್ದೇ ಕೊನೆ, ಆ ನಂತರ ಅವರನ್ನು ಭೇಟಿ ಆಗುವುದಕ್ಕೆ ಸಾಧ್ಯವಾಗಿಲ್ಲ. ಹಾಗಂತ ಅವರಲ್ಲಿ ಆತ್ಮೀಯತೆ ಕಡಿಮೆ ಆಗಿಲ್ಲ. ಈಗಲೂ ಅವರು ಮತ್ತು ಅವರ ಕುಟುಂಬದವರು ನನಗೆ ಬಹಳ ಆಪ್ತರು. ಸತ್ಯು ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ನೂರೆಂಟು ಶುಭಾಶಯಗಳು.