

ತಿರುವನಂತಪುರಂ: ನ್ಯಾಯಮೂರ್ತಿ ಹೇಮಾ ಸಮಿತಿ ನೀಡಿರುವ ವರದಿ, ಕೇರಳ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಭಾರಿ ಸಂಚಲನ ಮೂಡಿಸಿದೆ. ಈ ವರದಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಸ್ಟಾರ್ ನಟಿಯರು ಕೂಡ ಚಿತ್ರರಂಗದಲ್ಲಿ ತಾವು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ನಟಿ ರಂಜಿನಿ ಹರಿದಾಸ್ ಅವರು ನಟನೊಬ್ಬನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಂಜಿನಿ, ನಟನೊಬ್ಬ ತನಗೆ ಬೆತ್ತಲೆ ಫೋಟೋವನ್ನು ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಆ ನಟನ ಹೆಸರನ್ನು ಬಹಿರಂಗಪಡಿಸಿ ಎಂದಿದ್ದಕ್ಕೆ, ಅದು ಸಾಧ್ಯವಿಲ್ಲ ಏಕೆಂದರೆ, ಅದನ್ನು ಸಾಬೀತು ಮಾಡಲು ನನ್ನ ಬಳಿ ಯಾವುದೇ ಸಾಕ್ಷಿ ಇಲ್ಲ ಎಂದರು.
ನಟನೊಬ್ಬ ನನಗೆ ಬೆತ್ತಲೆ ಫೋಟೋ ಕಳುಹಿಸಿದರು. ಇಂಥಾ ಫೋಟೋವನ್ನು ಕಳುಹಿಸಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ಬಳಿಕ ನನ್ನ ಬೆತ್ತಲೆ ಫೋಟೋ ಕಳುಹಿಸುವಂತೆ ಕೇಳಿದರು. ಆದರೆ, ನಾನದಕ್ಕೆ ಸರಿಯಾದ ಉತ್ತರವನ್ನು ನೀಡಿದೆ. ಇಂದು ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಗಿಲು ತಟ್ಟುವ ಪರಿಸ್ಥಿತಿ ಇಲ್ಲ. ಅದು ಮತ್ತೆ ಬರುವುದೂ ಇಲ್ಲ. ಆದರೂ ಕೆಲವೊಬ್ಬರು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ, ಅವರ ಪರಿಸ್ಥಿತಿ ಆ ರೀತಿ ಇರುತ್ತದೆ ಎನ್ನುವ ಮೂಲಕ ಮಲಯಾಳಂ ಸಿನಿ ಇಂಡಸ್ಟ್ರಿಯ ಕಾಸ್ಟಿಂಗ್ ಕೌಚ್ ಕರಾಳ ಮುಖವನ್ನು ರಂಜಿನಿ ಬಿಚ್ಚಿಟ್ಟರು.
ಮುಂದೆ ಸಿನಿರಂಗಕ್ಕೆ ಕಾಲಿಡುವವರಿಗೆ ಇದೊಂದು ಪಾಠವಾಗಲಿದೆ. ಈ ಉದ್ಯಮದಲ್ಲಿ ತಂದೆ ಅಥವಾ ತಾಯಿ ದೊಡ್ಡ ಕಲಾವಿದರಾಗಿದ್ದರೆ ಅಥವಾ ನಿರ್ದೇಶಕ, ನಿರ್ಮಾಪಕರ ಕುಟುಂಬದವರಾಗಿದ್ದರೆ ಅಂಥವರಿಗೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಆದರೆ, ಯಾರ ಬೆಂಬಲವೂ ಇಲ್ಲದೇ ಸಿನಿಮಾ ಆಸೆಯಿಂದ ಬಂದವರು ಮಾತ್ರ ಕಾಮುಕರ ಹಳ್ಳಕ್ಕೆ ಬೀಳುತ್ತಾರೆ ಎಂದು ರಂಜಿನಿ ತಿಳಿಸಿದರು.
ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್)