ಅಟ್ಲಾಂಟ ಚಿತ್ರೋತ್ಸವದಲ್ಲಿ 'ಅಮೃತಮತಿ'ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

Amrutamathi - Final
Published on

ಬೆಂಗಳೂರು: ಹರಿಪ್ರಿಯಾ ಅಭಿನಯದ 'ಅಮೃತಮತಿ' ಚಿತ್ರವು ಈಗಾಗಲೇ ಆಸ್ಟ್ರಿಯಾ, ನೋಯ್ಡಾ, ಬೋಸ್ಟನ್​ ಮುಂತಾದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿದೆ. ಈ ಪೈಕಿ ನೋಯ್ಡಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹರಿಪ್ರಿಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಸಿಕ್ಕಿದೆ.

ಈ ಮಧ್ಯೆ, ಚಿತ್ರವು ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಚಿತ್ರವು ಆಯ್ಕೆಯಾಗಿತ್ತು. ಈಗ ಚಿತ್ರವು 'ಅತ್ಯುತ್ತಮ ವಿದೇಶಿ ಭಾಷಾಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿದೆ. ನೂರಾರು ಬೇರೆ ಭಾಷೆಯ ಚಿತ್ರಗಳೊಂದಿಗೆ ಸ್ಪರ್ಧಿಸಿರುವ ಈ ಚಿತ್ರವು, ಅಂತಿಮವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಹದಿಮೂರನೇ ಶತಮಾನದ ಜನ್ನಕವಿ ಬರೆದಿರುವ 'ಯಶೋಧರ ಚರಿತೆ' ಕಾವ್ಯವನ್ನು ಆಧರಿಸಿ 'ಅಮೃತಮತಿ' ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಮೂಲ ಕಥಾವಸ್ತುವನ್ನು ಮರುವ್ಯಾಖ್ಯಾನ ಮಾಡಿ, ಮರುಸೃಷ್ಟಿ ಮಾಡಿದ್ದಾರೆ ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಇಂಚರ ಪ್ರೊಡಕ್ಷನ್ಸ್​ನಡಿ ನಿರ್ಮಾಣವಾಗಿರುವ 'ಅಮೃತಮತಿ' ಚಿತ್ರವನ್ನು ಪುಟ್ಟಣ್ಣ ನಿರ್ಮಿಸಿದ್ದಾರೆ. ಚಿತ್ರಕ್ಕೆ ಜನಪ್ರಿಯ ಗಾಯಕಿ ಡಾ. ಶಮಿತಾ ಮಲ್ನಾಡ್​ ಸಂಗೀತ ಸಂಯೋಜಿಸಿದರೆ, ನಾಗರಾಜ ಆದವಾನಿ ಛಾಯಾಗ್ರಹಣ ಮಾಡಿದ್ದಾರೆ.

ಈ ಚಿತ್ರದಲ್ಲಿ ಹರಿಪ್ರಿಯಾ ಜತೆಗೆ ಕಿಶೋರ್, ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ವತ್ಸಲಾ ಮೋಹನ್​, ಸುಪ್ರಿಯಾ ರಾವ್​, ಅಂಬರೀಶ್​ ಸಾರಂಗಿ ಸೇರಿ ಹಲವರು ನಟಿಸಿದ್ದಾರೆ.

ಬರೀ ನಿರ್ದೇಶನವಷ್ಟೇ ಅಲ್ಲ, ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಮೂರು ಹಾಡುಗಳನ್ನು ಅವರು ಬರೆದಿದ್ದಾರೆ. ಮಿಕ್ಕಂತೆ ಎರಡು ಜಾನಪದ ಗೀತೆಗಳನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net