ಅಮೆರಿಕಗೆ ಹಾರಲಿರುವ ಅಮೃತಾ

amruta mar 20
Published on

ಬೆಂಗಳೂರು: ನಟ-ನಟಿಯರು ವಿದೇಶಕ್ಕೆ ಹಾರುವುದು ಹೊಸದೇನಲ್ಲ. ಶೂಟಿಂಗ್ ನಿಮಿತ್ತ ಅವರು ಬಹಳಷ್ಟು ಸಲ ವಿದೇಶ ಪ್ರಯಾಣ ಮಾಡಿ ಬಂದಿರುತ್ತಾರೆ. ಆದರೆ, ಕೆಲವರಷ್ಟೇ ಅಲ್ಲಿಗೆ ಹೋಗಿ ನೆಲೆಯೂರುತ್ತಾರೆ. ಹಿರಿಯ ನಟಿಯರಾದ ಆರತಿ, ಮಾಧವಿ ಮುಂತಾದವರೆಲ್ಲ ಇದಕ್ಕೆ ಬಹಳ ಹಿಂದಿನ ಉದಾಹರಣೆ ಯಾದರೆ, ನಟಿ ಸಂಗೀತಾ ಭಟ್ ಜರ್ಮನಿಗೆ ಹೋಗಿ ಸೆಟಲ್ ಆಗಿದ್ದು ಇತ್ತೀಚೆಗಿನ ನಿದರ್ಶನ. ಈಗ ಆ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ನಟಿ ಅಮೃತಾ ರಾವ್.

ಹೌದು, ಈಗಾಗಲೇ ಸ್ಯಾಂಡಲ್​ವುಡ್​ಗೆ ಬಾಯ್ ಹೇಳಿರುವ ಅಮೃತಾ ರಾವ್, ಶೀಘ್ರದಲ್ಲೇ ಅಮೆರಿಕೆಗೆ ಹಾಯ್ ಹೇಳಲಿದ್ದಾರೆ. ಸದ್ಯದಲ್ಲೇ ಸಪ್ತಪದಿ ತುಳಿಯಲಿರುವುದರಿಂದ ಅವರು ಈಗಾಗಲೇ ಚಿತ್ರರಂಗದಿಂದ ಆಚೆಗೆ ಹೆಜ್ಜೆ ಇಟ್ಟುಬಿಟ್ಟಿದ್ದಾರೆ. ಅಮೆರಿಕದಲ್ಲಿ ಸಾಫ್ಟ್​ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರೋಹಿತ್ ಅವರೊಂದಿಗೆ ಅಮೃತಾ ವಿವಾಹವಾಗಲಿದ್ದಾರೆ. ಉಭಯ ಕುಟುಂಬಗಳ ಹಿರಿಯರು, ಆಪ್ತರು, ಬಂಧು-ಬಳಗದ ಸಮ್ಮುಖದಲ್ಲಿ ಮಾರ್ಚ್ 11ರಂದು ಹೈದರಾಬಾದ್​ನಲ್ಲಿ ಶಾಸ್ತ್ರೆೊಕ್ತವಾಗಿ ಮದುವೆ ನೆರವೇರಲಿದೆ. ಬಳಿಕ ಮಾರ್ಚ್ 15ರಂದು ಬೆಂಗಳೂರಿನ ರಾಯಲ್ ಆರ್ಕಿಡ್ ರೆಸಾರ್ಟ್ ನಲ್ಲಿ ಆರತಕ್ಷತೆ ಸಮಾರಂಭ ಜರುಗಲಿದೆ. ‘ಹೈದರಾಬಾದ್​ನಲ್ಲಿ ನೆಲೆಸಿರುವ ಉದ್ಯಮಿ ಗಣನಾಥ ಮತ್ತು ಸಂಧ್ಯಾ ದಂಪತಿಯ ಪುತ್ರ ರೋಹಿತ್ ಮಧುಮಂಚಿ ಅವರ ಜತೆ ಜನವರಿ 5ರಂದು ನಿಶ್ಚಿತಾರ್ಥ ನಡೆದಿದೆ. ಇದು ಹಿರಿಯರೇ ನಿಗದಿಗೊಳಿಸಿರುವ ಮದುವೆ’ ಎಂಬುದಾಗಿ ಅಮೃತಾ ವಿಜಯವಾಣಿಗೆ ತಿಳಿಸಿದ್ದಾರೆ. ‘ಮಂಡ್ಯ ಟು ಮುಂಬೈ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ಅಮೃತಾ ರಾವ್, ಬಳಿಕ ‘ಡ್ರೀಮ್ ಗರ್ಲ್’, ‘ನನ್ ಮಗಳೇ ಹೀರೋಯಿನ್’ ಮತ್ತು ‘ಗೂಗಲ್’ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ, ಮದುವೆ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಚಿತ್ರರಂಗದಿಂದ ದೂರ ಉಳಿದಿರುವ ಅವರು, ಸದ್ಯಕ್ಕಂತೂ ವಿದಾಯ ಹೇಳಿದ್ದಾರೆ. ಹಾಗಂತ ಚಿತ್ರರಂಗದಲ್ಲಿ ಮುಂದುವರಿಯಲು ವರನ ಕಡೆಯವರಿಂದ ಯಾವುದೇ ಆಕ್ಷೇಪ ಇಲ್ಲ, ಇದು ತಮ್ಮದೇ ನಿರ್ಧಾರ ಎಂದಿದ್ದಾರೆ ಅಮೃತಾ.

ನನ್ನ ವೃತ್ತಿ-ಪ್ರವೃತ್ತಿಯ ಮುಂದುವರಿಕೆಗೆ ರೋಹಿತ್ ಮತ್ತು ಅವರ ಮನೆಯವರ ಕಡೆಯಿಂದ ಪೂರ್ತಿ ಒಪ್ಪಿಗೆ ಹಾಗೂ ಸ್ವಾತಂತ್ರ್ಯವಿದೆ. ಆದರೆ, ರೋಹಿತ್ ಅಮೆರಿಕದಲ್ಲಿ ಇರುವುದರಿಂದ ಮದುವೆ ಬಳಿಕ ನಾನೂ ಅಲ್ಲಿಗೇ ಹೋಗಿ ಸೆಟಲ್ ಆಗಲಿದ್ದೇನೆ. ಹೀಗಾಗಿ ಮುಂದಿನ ಒಂದೆರಡು ವರ್ಷವಂತೂ ಅಭಿನಯದಿಂದ ದೂರ. ನಂತರ ನನಗೆ ನಟಿಸಬೇಕು ಅನಿಸಿದರೆ ಚಿತ್ರರಂಗಕ್ಕೆ ಮರಳುತ್ತೇನೆ. | ಅಮೃತಾ ರಾವ್ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net