

Kichcha Sudeepa: ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿದ ತಾಯಿ ವಾಸ್ತವ ಜಗತ್ತಿನಿಂದ ಕಣ್ಣರೆಯಾಗುವ ದಿನ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅಗಾಧವಾದ ನೋವುಂಟು ಮಾಡುತ್ತದೆ. ಅಂಥದ್ದೇ ದಿನ ನಟ ಕಿಚ್ಚ ಸುದೀಪ್ ಬಾಳಲ್ಲಿ ಬಂದೆರಗಿದೆ. ನಿನ್ನೆ (ಅ.20) ತಮ್ಮ ತಾಯಿ ಸರೋಜಾ (86) ಅವರನ್ನು ಕಳೆದುಕೊಂಡು ನೋವಿನ ಕಡಲಲ್ಲಿ ಸುದೀಪ್ ಮುಳುಗಿದ್ದಾರೆ. ಅಂತ್ಯಕ್ರಿಯೆಗೂ ಮುನ್ನ "ಅಮ್ಮ ಎಲ್ಲಿ, ಯಾವಾಗಲೂ ನನ್ನ ಹಿಂದೆ ಇರುತ್ತಿದ್ದಳು" ಎಂದು ಅವರು ಹೇಳಿದ ಮಾತು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ತಾಯಿಯ ಎಲ್ಲ ಕಾರ್ಯಗಳನ್ನು ಮುಗಿಸಿರುವ ಸುದೀಪ್, ಜೀವನದ ಉದ್ದಕ್ಕೂ ಮಮತೆಯ ಸಿಹಿ ಉಣಿಸಿದ ತಾಯಿಯನ್ನು ನೆನೆದು ತಮ್ಮ ಎಕ್ಸ್ ಖಾತೆಯಲ್ಲಿ ಭಾವುಕವಾಗಿ ಬರೆಯುವ ಮೂಲಕ ವಿದಾಯ ಹೇಳಿದ್ದಾರೆ.
ನನ್ನ ತಾಯಿ, ಅತ್ಯಂತ ಪಕ್ಷಪಾತವಿಲ್ಲದ, ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಕೊಡುವಿಕೆಯ ಗುಣಗಳು ನನ್ನ ಜೀವನದಲ್ಲಿ ಅತ್ಯಂತ ಮೌಲ್ಯಯುತವಾಗಿದೆ, ಅದನ್ನು ಆಚರಿಸಲಾಗುತ್ತದೆ ಮತ್ತು ಯಾವಾಗಲೂ ಪಾಲಿಸಲಾಗುವುದು.
* ಮೌಲ್ಯ... ಏಕೆಂದರೆ ಅವಳು ನನ್ನ ಪಕ್ಕದಲ್ಲಿ ಮಾನವನ ರೂಪದಲ್ಲಿದ್ದ ನನ್ನ ನಿಜವಾದ ದೇವರು.
* ಆಚರಣೆ... ಏಕೆಂದರೆ ಅವಳು ನನ್ನ ಹಬ್ಬ. ನನ್ನ ಗುರು. ನನ್ನ ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟವಳು.
* ಪಾಲಿಸುವುದು...ಏಕೆಂದರೆ ಅವಳು ಈಗ ಸುಂದರ ನೆನಪು ಮಾತ್ರ.
ನಾನೀಗ ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಯಾವುದೇ ಪದಗಳಿಲ್ಲ. ನಾನು ಈ ಶೂನ್ಯವನ್ನು ಒಪ್ಪಿಕೊಳ್ಳಲು ಅಥವಾ ಏನು ನಡೆದಿದೆ ಎಂಬುದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಯಿತು. ಪ್ರತಿದಿನ ಬೆಳಗ್ಗೆ ನನ್ನ ಫೋನ್ನಲ್ಲಿನ ಮೊದಲ ಝೇಂಕಾರವೇ ಅಮ್ಮನ ಮೆಸೇಜ್ ಆಗಿರುತ್ತಿತ್ತು. ಸುಮಾರು 5.30ಕ್ಕೆ "ಶುಭೋದಯ ಕಂದ" ಎಂದು ಶುಭಕೋರುತ್ತಿದ್ದರು. ಅ.18ರ ಶುಕ್ರವಾರದಂದು ನಾನು ಅಮ್ಮನಿಂದ ಕೊನೆಯ ಮೆಸೇಜ್ ಸ್ವೀಕರಿಸಿದೆ. ಮರುದಿನ ಬೆಳಗ್ಗೆ ನಾನು (ಬಿಗ್ಬಾಸ್ನಲ್ಲಿ ಇರುವಾಗ) ಆಕೆಯ ಮೆಸೇಜ್ ಸ್ವೀಕರಿಸಲೇ ಇಲ್ಲ. ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಈ ರೀತಿ ಆಯಿತು. ಬಳಿಕ ನಾನು ಅಮ್ಮನಿಗೆ ನನ್ನ ಬೆಳಗಿನ ಮೆಸೇಜ್ ಅನ್ನು ಕಳುಹಿಸಿದೆ ಮತ್ತು ಎಲ್ಲವೂ ಸರಿಯಾಗಿದೆಯೇ ಎಂದು ಕರೆ ಮಾಡಲು ಮತ್ತು ವಿಚಾರಿಸಲು ಬಯಸಿದೆ. ಆದರೆ, ಬಿಗ್ಬಾಸ್ನ ಶನಿವಾರದ ಸಂಚಿಕೆಯ ಚರ್ಚೆಗಳು ತುಂಬಾ ಸಮಯವನ್ನು ತೆಗೆದುಕೊಂಡಿತು ಮತ್ತು ನಾನು ವೇದಿಕೆಗೆ ಹೋಗುವ ಮುನ್ನವೇ, ಅಮ್ಮ ಆಸ್ಪತ್ರೆಗೆ ದಾಖಲಾಗಿರುವುದಾಗಿ ನನಗೆ ಕರೆ ಬಂದಿತು. ಆ ವೇಳೆ ಆಸ್ಪತ್ರೆಯಲ್ಲಿದ್ದ ನನ್ನ ಸಹೋದರಿಗೆ ತಕ್ಷಣ ಕರೆ ಮಾಡಿದೆ ಮತ್ತು ವೈದ್ಯರೊಂದಿಗೂ ಮಾತನಾಡಿ ಮತ್ತೆ ಬಿಗ್ಬಾಸ್ ವೇದಿಕೆ ಮೇಲೆ ಹೋದೆ. ಇದಾದ ಸ್ವಲ್ಪ ಹೊತ್ತಲೇ ನನ್ನ ಕಡೆಯವರಿಂದ ಒಂದು ಮಸೇಜ್ ಬಂದಿತು. ಅಮ್ಮ ಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ಗೊತ್ತಾಯಿತು. ಈ ಅಸಹಾಯಕತೆಯನ್ನು ನನ್ನ ಜೀವನದಲ್ಲೇ ನಾನು ಮೊದಲ ಬಾರಿಗೆ ಅನುಭವಿಸಿದೆ. ನಾನಿಲ್ಲಿ ಶನಿವಾರದ ಸಂಚಿಕೆಯನ್ನು ನಿರ್ವಹಿಸುತ್ತಾ ಹಲವಾರು ಸಮಸ್ಯೆಗಳೊಂದಿಗೆ ವ್ಯವಹರಿಸುತ್ತಿದ್ದೆ ಮತ್ತು ನನ್ನ ಮನಸ್ಸಿನಲ್ಲಿ ನನ್ನ ತಾಯಿಯ ಬಗ್ಗೆ ಭಯವೂ ಇತ್ತು. ಇಷ್ಟೆಲ್ಲ ಇದ್ದರೂ ನಾನಿನ್ನೂ ಆ ಸಂಚಿಕೆಯ ಚಿತ್ರೀಕರಣದಲ್ಲಿ ಶಾಂತವಾಗಿ ಸಾಗಿದ್ದರೆ, ಎಲ್ಲ ಗೊಂದಲಗಳ ನಡುವೆ ನಾನು ಒಪ್ಪಿಕೊಂಡ ಕೆಲಸವನ್ನು ಹೇಗೆ ಮುಂದುವರಿಸಬೇಕೆಂದು ನನಗೆ ಕಲಿಸಿದ್ದಕ್ಕಾಗಿ ನನ್ನ ತಾಯಿಗೆ ನಾನು ಋಣಿಯಾಗಿದ್ದೇನೆ.
ಶನಿವಾರದ ಸಂಚಿಕೆಯನ್ನು ಮುಗಿಸಿದ ಬಳಿಕ ನಾನು ನೇರವಾಗಿ ಆಸ್ಪತ್ರೆಗೆ ದೌಡಾಯಿಸಿದೆ. ನಾನು ಆಸ್ಪತ್ರೆಗೆ ತಲುಪುವ ಕೆಲವೇ ಸಮಯಕ್ಕೂ ಮುನ್ನ ನನ್ನ ತಾಯಿಯನ್ನು ವೆಂಟಿಲೇಟರ್ ಮೇಲೆ ಇಟ್ಟರು. ಅವಳಿಗಿನ್ನೂ ಪ್ರಜ್ಞೆಯಿದ್ದರೂ ನಾನು ಅವಳನ್ನು ನೋಡಲು ಆಗಲಿಲ್ಲ. ಭಾನುವಾರ ಮುಂಜಾನೆ ಕೊನೆಯುಸಿರೆಳೆಯುವ ಮುನ್ನ ತುಂಬಾ ಹೋರಾಡಿದಳು. ಆದರೆ, ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು. ಇದನ್ನೆಲ್ಲ ಹಿಂದಿದ್ದ ಸ್ಥಿತಿಗೆ ಮರಳಿಸುವುದು ಹೇಗೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ಮೇಲೆ ಅಪ್ಪಳಿಸಿದ ಈ ವಾಸ್ತವವನ್ನು ಹೇಗೆ ಸ್ವೀಕರಿಸಬೇಕೆಂಬುದು ನನಗೆ ಗೊತ್ತಾಗುತ್ತಿಲ್ಲ. ನಾನು ಬಿಗ್ಬಾಸ್ ಶೂಟಿಂಗ್‌ಗೆ ಹೊರಡುವ ಮುನ್ನ ಬಿಗಿಯಾದ ಅಪ್ಪುಗೆಯನ್ನು ನೀಡಿದ ನನ್ನ ತಾಯಿ ಮುಂದಿನ ಕೆಲವೇ ಗಂಟೆಗಳಲ್ಲಿ ಇನ್ನಿಲ್ಲ ಎಂಬುದು ನಿಜಕ್ಕೂ ಕಠಿಣವಾದ ಸತ್ಯವಾಗಿದೆ. ನಮ್ಮ ಮನಸ್ಸು ಮತ್ತು ಹೃದಯ ಈ ಕಟು ವಾಸ್ತವವನ್ನು ಭೇದಿಸಲು ತನ್ನದೇಯಾದ ಸಮಯವನ್ನು ತೆಗೆದುಕೊಳ್ಳುತ್ತದೆ.
ನನ್ನ ತಾಯಿ ಶ್ರೇಷ್ಠ ಆತ್ಮ ಮತ್ತು ನಾನು ಅವಳನ್ನು ಸದಾ ಮಿಸ್ ಮಾಡಿಕೊಳ್ಳುತ್ತೇನೆ. ನನಗೆ ಖಚಿತವಾಗಿ ನಿನ್ನೆ ತಿಳಿದಿದೆ, ಮಂಗಳಕರ ದಿನವು ಅವಳನ್ನು ಈ ಭೂಮಿಯಿಂದ ತೆಗೆದುಕೊಳ್ಳಲು ಪ್ರಕೃತಿಯ ಮತ್ತು ದೇವರ ಆಯ್ಕೆಯಾಗಿದೆ. ಆಕೆಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಇದು ನಿಜವಾಗಿಯೂ ನಿಮ್ಮೆಲ್ಲರ ದಯೆಯಾಗಿತ್ತು. ಮೆಸೇಜ್ ಮತ್ತು ಟ್ವೀಟ್‌ಗಳ ಮೂಲಕ ನನ್ನನ್ನು ತಲುಪಿದ ಎಲ್ಲರಿಗೂ ನಾನು ಧನ್ಯವಾದಗಳು.
ನನ್ನ ತಾಯಿ.... ನನ್ನ ಜೀವನದ ಅತ್ಯಮೂಲ್ಯವಾದ ಮುತ್ತು ಕಳೆದು ಹೋಗಿದೆ. ಅವಳು ಶಾಂತಿಯಿಂದ ತುಂಬಿದ ಸ್ಥಳವನ್ನು ತಲುಪಿದ್ದಾಳೆ ಎಂದು ನನಗೆ ಖಾತ್ರಿಯಿದೆ. ಅಮ್ಮಾ ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಎಂದು ಸುದೀಪ್ ಭಾವುಕವಾಗಿ ಬರೆದುಕೊಂಡಿದ್ದಾರೆ.
ಅಂದಹಾಗೆ ಸುದೀಪ್ ತಾಯಿ ಸರೋಜಾ ಅವರು ಕಳೆದ ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಭಾನುವಾರ (ಅ.20) ಬೆಳಗ್ಗೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸುದೀಪ್ ಅವರಿಗೆ ತಮ್ಮ ತಾಯಿ ಸರೋಜಾ ಅಂದರೆ ತುಂಬಾ ಪ್ರೀತಿ. ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆಯಲ್ಲೂ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್, ನವರಾತ್ರಿ ಹಿನ್ನೆಲೆಯಲ್ಲಿ ಶೇರವಾನಿ ಧರಿಸಿ, ಬರಿಗಾಲಲ್ಲಿ ವೇದಿಕೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ್ದರು. ಕ್ಯಾಮೆರಾ ನೋಡಿಕೊಂಡು ‘ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ’ ಎಂದಿದ್ದರು.