ಅವರನ್ನ ನೋಡೋಕೆ ಇಷ್ಟ ಇರಲಿಲ್ಲ ... ಮನಸ್ಸು ಬಿಚ್ಚಿ ಮಾತನಾಡಿದ ಅಮಿತಾಭ್​

Amitabh - Rishi
Published on

ರಿಷಿ ಕಪೂರ್​ ನಿಧನರಾದ ಸಂದರ್ಭದಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಹೋಗಿ ಅವರ ಅಂತಿಮ ದರ್ಶನ ಪಡೆದಿದ್ದರು. ಆದರೆ, ರಿಷಿ ಕಪೂರ್​ ಅವರ ಜತೆಗೆ ಹಲವು ವರ್ಷಗಳ ಕಾಲ ಗೆಳೆತನ ಇದ್ದ ಮತ್ತು ರಿಷಿ ಜತೆಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮಾತ್ರ ರಿಷಿ ಕಪೂರ್​ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ. ತಾವು ಹಾಜರಾಗುವ ಬದಲು ಮಗ ಅಭಿಷೇಕ್​ ಬಚ್ಚನ್​ ಅವರನ್ನು ಕಳಿಸಿದ್ದರು. ಅಷ್ಟೇ ಅಲ್ಲ, ರಿಷಿ ಕಪೂರ್​ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವಾಗಲೂ, ಅಮಿತಾಭ್​ ಬಚ್ಚನ್​ ಒಮ್ಮೆಯೂ ಹೋಗಿ ನೋಡಲಿಲ್ಲವಂತೆ. ಇಷ್ಟಕ್ಕೂ ಅಮಿತಾಭ್​ ಬಚ್ಚನ್​ ಅವರು ರಿಷಿ ಕಪೂರ್​ರಿಂದ ಅಂತರ ಕಾಯ್ದುಕೊಂಡಿದ್ದು ಯಾಕೆ?

ಈಗ ಅಮಿತಾಭ್​ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಾವ್ಯಾಕೆ ರಿಷಿ ಕಪೂರ್​ ಅವರನ್ನು ಆಸ್ಪತ್ರೆಯಲ್ಲಿ ನೋಡುವುದಕ್ಕೆ ಹೋಗಲಿಲ್ಲ, ಅವರು ನಿಧನರಾದಾಗ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಶುಕ್ರವಾರ ಅಕ್ಷರ ಶ್ರದ್ಧಾಂಜಲಿ ಸಲ್ಲಿಸಿರುವ ಅವರು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ರಿಷಿ ಕಪೂರ್​ ಅವರು ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿದ್ದಾಗ, ಒಂದು ದಿನವೂ ತಮ್ಮ ಸಂಕಟವನ್ನು ಹೇಳಿಕೊಳ್ಳಲಿಲ್ಲ. ಅವರಿಗೆ ಫೋನ್​ ಮಾಡಿದಾಗಲೆಲ್ಲಾ, ಆಸ್ಪತ್ರೆಗೆ ಮಾಮೂಲಿ ಚೆಕಪ್​ಗೆ ಹೋಗಿ ಹೋಗುತ್ತಿರುವುದಾಗಿ ಹೇಳುತ್ತಿದ್ದರು. ಬಹಳ ಬೇಗ ಬಂದು ಬಿಡುವುದಾಗಿ ನುಡಿಯುತ್ತಿದ್ದರು. ಇನ್ನು ಅವರು ಆಸ್ಪತ್ರೆಗೆ ದಾಖಲಾದಾಗ, ಅವರನ್ನು ನೋಡುವ ಮನಸ್ಸು ನನಗಿರಲಿಲ್ಲ. ಏಕೆಂದರೆ, ನಾನು ನೋಡಿದ ಚಿಂಟು, ಸದಾ ಹಸನ್ಮುಖಿ. ಯಾವಾಗಲೂ ನಗುತ್ತಾ, ಬೇರೆಯವರನ್ನು ನಗಿಸುತ್ತಾ ಇದ್ದರು. ಅವರ ಬಾಡಿದ ಮುಖ ನೋಡುವುದಕ್ಕೆ ನನಗೆ ಮನಸ್ಸಿರಲಿಲ್ಲ. ಹಾಗಾಗಿ ನಾನು ಅವರನ್ನು ಕಡೆಯದಾಗಿ ಭೇಟಿ ಮಾಡಲೇ ಇಲ್ಲ. ಬಹುಶಃ ಅವರು ಸಾಯುವಾಗಲೂ ನಗುತ್ತಲೇ ಪ್ರಾಣ ಬಿಟ್ಟಿರಬೇಕು" ಎಂದು ಅಮಿತಾಭ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net