ಹೆದರಿಸಲು ಬರುತ್ತಿದ್ದಾಳೆ ‘ಅಂಬುಜಾ’; ಟೀಸರ್​ ಬಿಡುಗಡೆ

Ambuja - Final
Published on

ಬೆಂಗಳೂರು: ಶುಭಾ ಪೂಂಜಾ, 'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ರಜಿನಿ ಮುಂತಾದವರು ಅಭಿನಯಿಸಿರುವ ‘ಅಂಬುಜಾ’ ಚಿತ್ರದ ಚಿತ್ರೀಕರಣ ಮುಗಿದು ಕೆಲವು ದಿನಗಳೇ ಆಗಿವೆ. ಈಗ ಚಿತ್ರತಂಡದವರು ಚಿತ್ರದ ಪ್ರಚಾರವನ್ನು ಶುರು ಮಾಡಿದ್ದು, ಮೊದಲ ಹಂತವಾಗಿ, ಇತ್ತೀಚೆಗೆ ಟೀಸರ್​ ಹಾಗೂ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದು, ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು ಚಿತ್ರವನ್ನು ನಿರ್ದೇಶಿಸಿದ್ದು, 'ಕೆಲವು ದಿನಗಳ ನಂತರ' ಸಿನಿಮಾ ಮಾಡಿದ್ದ ಇವರಿಗೆ ಇದು ಎರಡನೇ ಸಿನಿಮಾ.

ಚಿತ್ರ ಮತ್ತು ತಮ್ಮ ಪಾತ್ರದ ಕುರಿತು ಮಾತನಾಡಿದ ಶುಭಾ ಪೂಂಜಾ, 'ಶ್ರೀನಿ ಅವರ ಜೊತೆ ಈ ಹಿಂದೆ 'ಕೆಲವು ದಿನಗಳ ನಂತರ' ಸಿನಿಮಾ ಮಾಡಿದ್ದೆ, ಇದೀಗ ಅವರ ನಿರ್ದೇಶನದಲ್ಲಿ ಕ್ರೈಂ ಥ್ರಿಲ್ಲರ್ ಕಂ ಹಾರಾರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನ್ನದು ಕ್ರೈಂ ರಿಪೋರ್ಟರ್ ಪಾತ್ರ. ಚಿತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ' ಎಂದರು.

ಕಥೆ ಮತ್ತು ಪಾತ್ರ ವಿಶೇಷವಾಗಿದೆ ಎನ್ನುವ ರಜನಿ, 'ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ. ಚಿತ್ರೀಕರಣ ಸಮಯದಲ್ಲಿ ತಾಂಡಾದ ಜನ ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವೂ ತುಂಬಾ ಖುಷಿ ಕೊಟ್ಟಿದೆ. ಲಂಬಾಣಿ ಪಾತ್ರ ಅಂದಾಗ ನನಗೆ ಬಹಳ ಖುಷಿ ಆಯ್ತು. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ಎಲ್ಲ ತುಂಬಾ ನೋವಾಗುತ್ತಿತ್ತು. ಆಮೇಲೆ ಅಡ್ಜೆಜ್ಟ್ ಆಯ್ತು. ಸಿನಿಮಾದ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ' ಎಂದು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಸಂತಸ ಹಂಚಿಕೊಳ್ಳುತ್ತಾರೆ.

‘ಅಂಬುಜಾ’ ಪಕ್ಕ ಕಮರ್ಶಿಯಲ್ ಚಿತ್ರವಾಗಿದ್ದರೂ ಮನೆಮಂದಿಯೆಲ್ಲ ಕುಳಿತು ನೋಡಬಹುದು ಎನ್ನುವ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್, 'ಕಥೆ ಬರೆದಾಗ ಖುಷಿಯಾಯಿತು, ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಎಂದರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತಾ ಹೋಯಿತು. ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. ಪ್ರೇಕ್ಷಕರು ನೋಡಿ ಹರಸಬೇಕು' ಎನ್ನುತ್ತಾರೆ.

ಈ ಚಿತ್ರದಲ್ಲಿ ಶುಭಾ ಪೂಂಜಾ, ಪದ್ಮಜಾ ರಾವ್, ರಜಿನಿ, 'ಕಾಮಿಡಿ ಕಿಲಾಡಿಗಳು' ಗೋವಿಂದೇಗೌಡ, ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಮುರಳೀಧರ್ ಎಂ ಛಾಯಾಗ್ರಹಣ ಮತ್ತು ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net