ಮೂರು ಚಿತ್ರಗಳಲ್ಲಿ ಒಂದೇ ಪಾತ್ರ ಮಾಡಿದ್ದರು ಅಂಬರೀಶ್!

Ambarish Final
Published on

‘ರೆಬೆಲ್ ಸ್ಟಾರ್’ ಅಂಬರೀಶ್ ಇದುವರೆಗೂ ಹಲವು ವಿಭಿನ್ನ ಪಾತ್ರಗಳಲ್ಲಿ ಜನರನ್ನು ಮನರಂಜಿಸಿದ್ದಾರೆ. ಪ್ರೇಕ್ಷಕರು ಸಹ ಅಂಬರೀಶ್ ಅವರ ಹಲವು ಪಾತ್ರಗಳನ್ನು ಇಷ್ಟಪಟ್ಟಿದ್ದಾರೆ. ಆದರೆ, ಅದೊಂದು ಪಾತ್ರ ಮಾತ್ರ ಇದುವರೆಗೂ ಜನ ಮರೆತಿಲ್ಲ. ಅಷ್ಟೇ ಅಲ್ಲ, ಆ ಪಾತ್ರವನ್ನು ಒಂದಲ್ಲ, ಎರಡಲ್ಲ, ಮೂರು ಚಿತ್ರಗಳಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ.

ಹೌದು, ಅಂಬರೀಶ್ ಅವರು ಮೂರು ಚಿತ್ರಗಳಲ್ಲಿ ಒಂದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಕನ್ನಡ ಚಿತ್ರರಂಗದಲ್ಲಿ ಯಾವ ನಟ ಸಹ ಒಂದೇ ಪಾತ್ರವನ್ನು, ಮೂರು ಚಿತ್ರಗಳಲ್ಲಿ ನಿರ್ವಹಿಸಿರುವ ಉದಾಹರಣೆ ಸಿಗುವುದಿಲ್ಲ. ಆ ಪಾತ್ರ ಯಾವುದು ಗೊತ್ತಾ? ಕನ್ವರ್‌ಲಾಲ್.

‘ಅಂತ’ ಚಿತ್ರದ ಅತ್ಯಂತ ಜನಪ್ರಿಯ ಪಾತ್ರವೆಂದರೆ ಅದು ಕನ್ವರ್‌ಲಾಲ್‌ನದು. ಅಷ್ಟೇ ಅಲ್ಲ, ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವೂ ಇದೇ ಪಾತ್ರ. ಅಂಬರೀಶ್ ಅವರು ಈ ಚಿತ್ರದಲ್ಲಿ ಸುಶೀಲ್ ಕುಮಾರ್ ಮತ್ತು ಕನ್ವರ್‌ಲಾಲ್ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ಜನ ಈಗಲೂ ಕನ್ವರ್‌ಲಾಲ್‌ನನ್ನು ಮರೆತಿಲ್ಲ. ಆ ಪಾತ್ರದ ವಿಶಿಷ್ಟ ಮ್ಯಾನರಸಿಂ, ಡೈಲಾಗ್ ಹೇಳುವ ರೀತಿಯನ್ನು ಜನ ಈಗಲೂ ನೆನಪಿಟ್ಟುಕೊಂಡಿದ್ದಾರೆ ಎನ್ನುವುದು ವಿಶೇಷ.

ಈ ಚಿತ್ರದ ನಂತರ ಅಂಬರೀಶ್, ಬೇರೆ ಬೇರೆ ತರಹದ ಪ್ರಯೋಗಗಳನ್ನು ಮಾಡಿದರು. ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರನ್ನು ಮತ್ತೆ ಕನ್ವರ್ ಲಾಲ್ ಪಾತ್ರದಲ್ಲಿ ತೋರಿಸಿದ್ದು ಉಪೇಂದ್ರ. ‘ಅಂತ’ ಚಿತ್ರದ ಮುಂದುವರೆದ ಭಾಗವಾದ ‘ಆಪರೇಷನ್ ಅಂತ’ದಲ್ಲಿ ಅಂಬರೀಶ್ ಪುನಃ ಕನ್ವರ್ ಲಾಲ್ ಆಗಿ ಕಾಣಿಸಿಕೊಂಡಿದ್ದರು. ಆದರೆ, ಈ ಚಿತ್ರ ಮೂಲ ಚಿತ್ರದಷ್ಟು ಯಶಸ್ವಿಯಾಗಲಿಲ್ಲ.

ಅದಾಗಿ ಎಷ್ಟೋ ವರ್ಷಗಳ ನಂತರ, ‘ಅಂತ’ ಚಿತ್ರದಲ್ಲಿ ಅಂಬರೀಶ್ ಅವರನ್ನು ಕನ್ವರ್ ಆಗಿಸಿದ್ದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರೇ, ‘ತಿಪ್ಪಾರಳ್ಳಿಯ ತರಲೆಗಳು’ ಎಂಬ ಇನ್ನೊಂದು ಚಿತ್ರ ಮಾಡಿದರು. ಆ ಚಿತ್ರದಲ್ಲಿ ಅಂಬರೀಶ್ ಮತ್ತೊಮ್ಮೆ ಕನ್ವರ್ ಲಾಲ್ ಪಾತ್ರ ಮಾಡಿ ಗೆದ್ದಿದ್ದರು.

ಬರೀ ಅಷ್ಟೇ ಅಲ್ಲ, 80ರ ದಶಕದಲ್ಲಿ ಬಿಡುಗಡೆಯಾಗಿದ್ದ ‘ಅಂತ’ ಅದೆಷ್ಟು ಹಿಟ್ ಆಗಿತ್ತು ಎಂದರೆ, ಅದು ತಮಿಳು ಮತ್ತು ಹಿಂದಿಗೆ ಸಹ ರೀಮೇಕ್ ಆಗಿತ್ತು. ಅಂಬರೀಶ್ ಅವರು ಮಾಡಿದ್ದ ಪಾತ್ರಗಳನ್ನು ತಮಿಳಿನ ‘ತ್ಯಾಗು’ ಚಿತ್ರದಲ್ಲಿ ಶಿವಾಜಿ ಗಣೇಶನ್ ಮಾಡಿದರೆ, ಹಿಂದಿಯ ‘ಮೇರಿ ಆವಾಜ್ ಸುನೋ’ ಚಿತ್ರದಲ್ಲಿ ಜಿತೇಂದ್ರ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net