ಅಂಬಾನಿ ಪುತ್ರನ ಅಂಬಾರಿ

prajwal devraj mar 20
Published on

ಚಂಚಲ ಮನಸ್ಸುಳ್ಳ ಶ್ರೀಮಂತ ಹುಡುಗರ ಕಥೆ ಸಾಕಷ್ಟು ಸಿನಿಮಾ ಆಗಿದೆ. ಆ ಸಾಲಿಗೆ ಈಗ ‘ಅಂಬಾನಿ ಪುತ್ರ’ ಎಂಬ ಚಿತ್ರವನ್ನೂ ಸೇರಿಸಿಕೊಂಡು ಬಿಡಿ. ಹೆಸರು ಕೇಳಿ, ಅಂಬಾನಿಗೂ ಈ ಚಿತ್ರಕ್ಕೂ ಏನೋ ಸಂಬಂಧವಿರಬಹುದು ಎಂಬ ಸಂಶಯ ಬೇಡ. ಆ ಅಂಬಾನಿಯೇ ಬೇರೆ, ಚಿತ್ರದಲ್ಲಿರುವ ಅಂಬಾನಿಯೇ ಬೇರೆ.

ಶ್ರೀಮಂತ ಕುಟುಂಬದ ಹುಡುಗನ ಕಥೆಯಾದ್ದರಿಂದ ‘ಅಂಬಾನಿ ಪುತ್ರ’ ಎಂಬ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ. ಅಂದಹಾಗೆ, ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ದೊರೆ ರಾಜ್ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಸುಪ್ರೀಂ ಎನ್ನುವವರು ಹೀರೋ ಆಗಿದ್ದು, ಅವರಿಗೆ ನಾಯಕಿಯರಾಗಿ ಆಶಾ ಭಂಡಾರಿ ಮತ್ತು ಕಾವ್ಯ ಇದ್ದಾರೆ. ಈಗಾಗಲೇ ಚಿತ್ರ ಸಂಪೂರ್ಣವಾಗಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಈ ‘ಅಂಬಾನಿ ಪುತ್ರ’ನ ವೈಶಿಷ್ಟ್ಯವೇನು ಎಂದರೆ, ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಎಂಬ ಉತ್ತರ ನಿರ್ದೇಶಕರಿಂದ ಬರುತ್ತದೆ. ‘ಇದೊಂದು ಶ್ರೀಮಂತ ಹುಡುಗನ ಕಥೆ. ಅವನಿಗೆ ಚಂಚಲ ಮನಸ್ಸು. ಅವನು ಏನೆಲ್ಲ ಮಾಡುತ್ತಾನೆ ಅನ್ನೋದನ್ನ ಕಾಮಿಡಿಯಾಗಿ ಹೇಳಲಾಗಿದೆ.

ಈ ಚಿತ್ರಕ್ಕೆ ‘ಅಂಬಾನಿ ಪುತ್ರ’ ಶೀರ್ಷಿಕೆಯಾದರೆ, ‘ಓದಿರೋದು ಕಾ..ಸೂತ್ರ’ ಎಂಬ ಟ್ಯಾಗ್​ಲೈನ್ ಸಹ ಇದೆ. ಅದನ್ನು ನೀವು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು’ ಎನ್ನುತ್ತಾರೆ ದೊರೆ ರಾಜ್. ನಾಯಕ ಸುಪ್ರೀಂಗೆ ಇದು ಮೊದಲ ಚಿತ್ರ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ನೆಲೆ ನಿಲ್ಲುವ ವಿಶ್ವಾಸ ಇರುವ ಸುಪ್ರೀಂ, ‘ಹೊಸಬರು ಗೆಲ್ಲಬೇಕಾದರೆ, ಎಲ್ಲರ ಸಹಕಾರ ಮುಖ್ಯ’ ಎನ್ನುತ್ತಾರೆ. ಇನ್ನು ನಾಯಕಿಯರಾದ ಆಶಾ ಮತ್ತು ಕಾವ್ಯಾ ಅವರಿಗೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂಬ ಖುಷಿ ಇದೆ. ‘ಅಂಬಾನಿ ಪುತ್ರ’ ಚಿತ್ರಕ್ಕೆ ಅಭಿಷೇಕ್ ರಾಯ್ ಸಂಗೀತ ಸಂಯೋಜಿಸಿದ್ದು, ವೆಂಕಟೇಶ್ ಮತ್ತು ವರುಣ್ ಸೇರಿ ಜೊತೆಯಾಗಿ ಚಿತ್ರ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net