

ಬೆಂಗಳೂರು: ಇಂದು (ಮೇ 29) ‘ರೆಬೆಲ್ ಸ್ಟಾರ್’ ಅಂಬರೀಷ್ ಅವರ 71ನೇ ಹುಟ್ಟುಹಬ್ಬ. ಕಳೆದ ಎರಡು ವರ್ಷಗಳಿಂದ ಕರೊನಾದಿಂದಾಗಿ ಅವರ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಅಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅದು ಸಾಧ್ಯವಾಗಲಿದೆ. ಎಂದಿನಂತೆ ಅವರ ಕುಟುಂಬವರ್ಗದವರು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಇರುವ ಅಂಬರೀಷ್ ಅಭಿಮಾನಿಗಳು ಈ ಸಂದರ್ಭದಲ್ಲಿ ಪುಣ್ಯಭೂಮಿಗೆ ಭೇಟಿ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಲ್ಲದೆ ಅಂಬರೀಷ್ ನೆನಪಿನಲ್ಲಿ ಮಂಡ್ಯ ಜಿಲ್ಲೆಯ ಹಲವೆಡೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮದ್ದೂರು ತಾಲ್ಲೂಕು ಅಂಬರೀಷ್ ಅಭಿಮಾನಿಗಳ ಒಕ್ಕೂಟದ ಪ್ರಧಾನ ಕಚೇರಿ ಸಹ ಉದ್ಘಾಟನೆಯಾಗಲಿದೆ. ಅದಲ್ಲದೆ, ರಾಜ್ಯಾದ್ಯಂತ ಹಲವು ಶಿಬಿರಗಳನ್ನು ಸಹ ಆಯೋಜಿಸಲಾಗಿದೆ.
ಇನ್ನು, ಇದೇ ಸಂದರ್ಭದಲ್ಲಿ ಅಂಬರೀಷ್ ಅವರ ಮಗ ಅಭಿಷೇಕ್ ಅಭಿನಯದ ಎರಡು ಹೊಸ ಚಿತ್ರಗಳ ಘೋಷಣೆಯಾಗಲಿದೆ. ಛಾಯಾಗ್ರಾಹಕ ಕೃಷ್ಣ ನಿರ್ವಿುಸಿ-ನಿರ್ದೇಶಿಸುತ್ತಿರುವ ‘ಕಾಳಿ’ ಹಾಗೂ ‘ಮದಗಜ’ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ಅಭಿಷೇಕ್ ನಟಿಸುತ್ತಿದ್ದು, ಎರಡೂ ಚಿತ್ರಗಳ ಅಧಿಕೃತ ಘೋಷಣೆಯಾಗಲಿದೆ.