ಅಂಬರೀಷ್ 70ನೇ ವರ್ಷದ ಹುಟ್ಟುಹಬ್ಬ; ಅಭಿಮಾನಿಗಳ ಜತೆ ಆಚರಿಸಿದ ಸುಮಲತಾ, ಅಭಿಷೇಕ್..

Ambareesh
Published on

ಬೆಂಗಳೂರು: ನಟ ಅಂಬರೀಷ್ ಅವರ 70ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾನುವಾರ (ಮೇ 29) ಸಂಸದೆ ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಅಂಬರೀಷ್ ಕಂಠೀರವ ಸ್ಟುಡಿಯೋ ದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವರ್ಷ ಅಂಬರೀಷ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳ ಪೂರ್ಣಗೊಂಡಿವೆ. ಹೀಗಾಗಿಯೇ ಈ ಬಾರಿ ಬೆಳಗ್ಗೆಯಿಂದಲೇ ನೂರಾರು ಅಭಿಮಾನಿಗಳು ಅಂಬಿ ಸಮಾಧಿಗೆ ನಮಸ್ಕರಿಸಿದರು. ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಒಟ್ಟಾಗಿ ಕೇಕ್ ಕಟ್ ಮಾಡಿ, ಸಿಹಿ ಹಂಚಿದರು. ನಿರ್ವಪಕ ರಾಕ್​ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ ಸಹ ಪಾಲ್ಗೊಂಡಿದ್ದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸುಮಲತಾ, ‘ಅಂಬರೀಷ್ ಅವರು ಜೀವನದಲ್ಲಿ ನಡೆದುಕೊಂಡು ಬಂದ ರೀತಿ, ಹಂಚಿದ ಪ್ರೀತಿಯಿಂದ ಜನ ಆ ನೆನಪನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 50 ವರ್ಷಗಳಾದ ಕಾರಣ ಅಭಿಮಾನಿಗಳು ಬೆಳ್ಳಿ ನಾಣ್ಯ ಮಾಡಿಸಿದ್ದಾರೆ. ಅವರ ಪ್ರೀತಿಯ ಋಣ ತುಂಬ ದೊಡ್ಡದು’ ಎಂದರು. ನಂತರ ಮಾತನಾಡಿದ ಅಭಿಷೇಕ್, ‘ಅಪ್ಪಾಜಿ ಮೇಲೆ ಅಭಿಮಾನಿಗಳ ಪ್ರೀತಿ ಸದಾ ಹೀಗೇ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಈ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ಅಪ್ಪಾಜಿ ಸಂಪಾದಿಸಿದ್ದಾರೆ. ಅಪ್ಪಾಜಿನ ಕಳೆದುಕೊಂಡು ಈಗ ನಾಲ್ಕು ವರ್ಷಗಳಾಗಿವೆ. ಆದರೆ, ಅವರು ಈಗಲೂ ನಮ್ಮಲ್ಲಿ ಶಕ್ತಿ ತುಂಬುತ್ತಿದ್ದಾರೆ. ಅಭಿಮಾನಿಗಳೇ ಸೇರಿ ನಮ್ಮಲ್ಲಿ ಅಪ್ಪಾಜಿ ಇಲ್ಲ ಎಂಬ ಭಾವನೆಯನ್ನು ತೆಗೆಯುವ ಪ್ರಯತ್ನ ಮಾಡುತ್ತಾರೆ’ ಎಂದರು. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಂಬರೀಷ್ ಸ್ಮಾರಕ ನಿರ್ವಣದ ಕೆಲಸಗಳು ಪ್ರಾರಂಭವಾಗಿದ್ದು, ಅದರ ಪ್ಲಾ್ಯನ್​ಅನ್ನೂ ಸುಮಲತಾ ಪರಿಶೀಲನೆ ನಡೆಸಿದರು. ಕಾಮಗಾರಿಗಾಗಿ ಮರಗಳನ್ನು ಕಡಿಯದಂತೆ ತಿಳಿಸಿದರು.

ಮುಂದಿನ ಸಿಎಂ, ಸುಮಲತಾ!

ಈ ಸಂದರ್ಭದಲ್ಲಿ ಅಭಿಮಾನಿಗಳು ಮುಂದಿನ ಸಿಎಂ ಸುಮಲತಾ ಎಂದು ಘೋಷಣೆ ಕೂಗಿದರು. ಆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ, ‘ಅವರ ಅಭಿಮಾನ, ಅವರ ಮನಸ್ಸಿನಲ್ಲಿರುವುದನ್ನು ಹೇಳುತ್ತಾರೆ. ಅದನ್ನೆಲ್ಲ ನಾನು ಗಂಭೀರವಾಗಿ ತೆಗೆದು ಕೊಳ್ಳುವುದಿಲ್ಲ’ ಎಂದರು.

ಕಾಳಿಯಾದ ಅಭಿಷೇಕ್, 4ನೇ ಚಿತ್ರವೂ ಘೋಷಣೆ!

‘ಅಮರ್’ ಚಿತ್ರದ ಬಳಿಕ ಅಭಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಬಿಜಿ ಇದ್ದಾರೆ. ಅದರ ಜತೆಗೆ ಭಾನುವಾರ ಎರಡು ಚಿತ್ರಗಳು ಘೋಷಣೆಯಾಗಿವೆ. ‘ಹೆಬ್ಬುಲಿ’ ಖ್ಯಾತಿಯ ಕೃಷ್ಣ ನಿರ್ದೇಶಿಸಲಿರುವ ಅಭಿಷೇಕ್ ಮೂರನೇ ಸಿನಿಮಾ ‘ಕಾಳಿ’ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಹಾಗೇ ‘ಮದಗಜ’ ಮಹೇಶ್ ನಿರ್ದೇಶಿಸಲಿರುವ ಅಭಿಷೇಕ್ ನಾಲ್ಕನೇ ಚಿತ್ರವೂ ಘೋಷಣೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net