

ಕನ್ನಡದ ‘ಹೆಬ್ಬುಲಿ’ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್, ದಕ್ಷಿಣ ಭಾರತದ ಬೇರೆ ಚಿತ್ರರಂಗಗಳಲ್ಲಿ ತುಂಬ ಬಿಜಿ ನಟಿ. ಆದರೆ, 2019ರಿಂದ ಎರಡು ವರ್ಷಗಳ ಕಾಲ ಬ್ರೇಕ್ ಪಡೆದಿದ್ದರು. ಏಕೆ? ಏನು? ಎಂದು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಬ್ರೇಕ್ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ಹೌದು, 17ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದ ಅಮಲಾ, 2019ರವರೆಗೆ 32 ಚಿತ್ರಗಳಲ್ಲಿ ನಟಿಸಿದ್ದರು. ತಮಿಳು, ತೆಲುಗು, ಮಲಯಾಳಂ ಹೀಗೆ ತಮ್ಮ ಸಿನಿಜೀವನದ ಪೀಕ್ನಲ್ಲಿದ್ದ ಸಮಯದಲ್ಲಿ ಹಠಾತ್ತಾಗಿ ಕಣ್ಮರೆಯಾಗಿಬಿಟ್ಟರು. ಅದೇ ಸಮಯದಲ್ಲಿ ಅವರ ತಂದೆ ವಿಧಿವಶರಾದರು. ಅದರ ಬೆನ್ನಲ್ಲೇ ಕರೋನಾ ಲಾಕ್ಡೌನ್ ಪ್ರಾರಂಭವಾಗಿ ಅವರು ಚಿತ್ರರಂಗದಿಂದ ಮತ್ತಷ್ಟು ದೂರಾಗಿದ್ದರು.
ಆ ಬಗ್ಗೆ ಹೇಳಿಕೊಳ್ಳುವ ಅಮಲಾ, ‘ನನ್ನ ಚಿತ್ರಗಳು ಸಕ್ಸಸ್ ಆಗುತ್ತಿಲ್ಲ, ನನಗೆ ಅವಕಾಶಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಾನು ಚಿತ್ರರಂಗದಿಂದ ದೂರಾಗಿರಲಿಲ್ಲ. ನನ್ನ ಕರಿಯರ್ನ ಅತಿ ದೊಡ್ಡ ಅವಕಾಶಗಳು ನನಗೆ ಆ ಸಮಯದಲ್ಲಿ ಸಿಕ್ಕಿದ್ದರೂ, ನಾನು ಒಪ್ಪಿರಲಿಲ್ಲ. ಏಕೆಂದರೆ ನನಗೆ ಬ್ರೇಕ್ ಬೇಕಿತ್ತು. 13 ವರ್ಷಗಳಿಂದ ಒಮ್ಮೆಯೂ ಬ್ರೇಕ್ ಪಡೆಯದೇ ಸತತವಾಗಿ ಕೆಲಸ ಮಾಡಿ ನನಗೂ ಸಾಕಾಗಿಹೋಗಿತ್ತು. ನನ್ನವರನ್ನು ಕಳೆದುಕೊಂಡಿದ್ದೆ, ಕರೋನಾ ಲಾಕ್ಡೌನ್ ಆಗಿತ್ತು. ಆ ಸಮಯದಲ್ಲಿ ನನ್ನನ್ನು ನಾನು ಅರಿತುಕೊಳ್ಳಲು, ನನ್ನ ಜೀವನ, ಜರ್ನಿ ಬಗ್ಗೆ ತಿಳಿದುಕೊಳ್ಳಲು, ನನ್ನ ಮನಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಲು ಸಾಧ್ಯವಾಯಿತು’ ಎಂದಿದ್ದಾರೆ.
ಮಣಿರತ್ನಂ ಚಿತ್ರಕ್ಕೆ ನೋ ಎಂದಿದ್ದೇಕೆ ಗೊತ್ತಾ?: ಇನ್ನು ಮಣಿರತ್ನಂ ಅವರ ಮೆಗಾ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲೂ ಅಮಲಾ ಪೌಲ್ ನಟಿಸಬೇಕಿತ್ತಂತೆ. ಕೆಲವು ವರ್ಷಗಳ ಹಿಂದೆ ಆಡಿಷನ್ನಲ್ಲಿ ಆಯ್ಕೆಯಾದಾಗ ತುಂಬ ಖುಷಿಪಟ್ಟಿದ್ದರಂತೆ. ಆದರೆ, ಕಳೆದ ವರ್ಷ ಚಿತ್ರದ ಚಿತ್ರೀಕರಣಕ್ಕೆ ಕರೆದಾಗ ಒಲ್ಲೆ ಎಂದರಂತೆ ಅಮಲಾ. ಅದಕ್ಕೆ ಸ್ಪಷ್ಟನೆ ನೀಡುವ ಅವರು, ‘ನಾನು ಮಣಿರತ್ನಂ ಸರ್ ದೊಡ್ಡ ಅಭಿಮಾನಿ. ಆದರೆ ಅವರು ಚಿತ್ರೀಕರಣಕ್ಕೆ ಕರೆದಾಗ ಆ ಚಿತ್ರದಲ್ಲಿ ನಟಿಸಲು ನಾನು ಮಾನಸಿಕವಾಗಿ ಸಿದ್ಧಳಿರಲಿಲ್ಲ. ಅದಕ್ಕೆ ಒಪ್ಪಲಿಲ್ಲ. ಹಾಗಂತ ನನಗೆ ಬೇಸರವೂ ಇಲ್ಲ’ ಎಂದಿದ್ದಾರೆ. ಕಳೆದ ವರ್ಷ ‘ಕುಟ್ಟಿ ಸ್ಟೋರಿ’ ಮೂಲಕ ಬ್ರೇಕ್ನಿಂದ ವಾಪಸ್ಸಾದ ಅಮಲಾ, ಆ ಬಳಿಕ ‘ಪಿಟ್ಟ ಕಥಾಲು’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಿದ್ದರು. ಈ ವರ್ಷ ಅವರು ನಟಿಸಿರುವ ತಮಿಳಿನ ‘ಕೆಡವೆರ್’ ಓಟಿಟಿಯಲ್ಲಿ ಬಿಡುಗಡೆಯಾಗಿದ್ದು, ಸದ್ಯ ಮೂರು ಮಲಯಾಳಂ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್