

ಮುಂಜಾನೆ 3ರವರೆಗೂ ಡಿಜೆ ಶಬ್ಧ ಹೈದರಾಬಾದ್ ಪೊಲೀಸರಿಗೆ ದೂರು ಕೊಟ್ಟ ನಟ
ನಾನು ಹನುಮಾನ್ ಭಕ್ತ, ಆದರೆ ಡಿಜೆ ಹಾಡು ಹಾಕೋದು ಭಕ್ತಿಯಲ್ಲ ಎಂದ ಅಲ್ಲು ಸಿರೀಶ್
ಭಕ್ತಿ ವಿರುದ್ಧ ದೂರು ಕೊಟ್ಟಿಲ್ಲ ನಾಗರಿಕ ಪ್ರಜ್ಞೆ ವಿಚಾರವಾಗಿ ದೂರು ನೀಡಿದ್ದೇನೆ ಎಂದ ನಟ
Allu Sirish: 'ನಾನು ಸಹ ಹನುಮಂತನ ಭಕ್ತನೇ ಹೌದು. ಆದರೆ, ರಾತ್ರಿ 2 ಗಂಟೆಗೆ ಡಿಜೆ ಹಾಕಿ ಮತ್ತೊಬ್ಬರಿಗೆ ಸಮಸ್ಯೆಯುಂಟು ಮಾಡುವುದು ಭಕ್ತಿಯಲ್ಲ. ನಾನು ದೂರು ನೀಡಿರುವುದು ಭಕ್ತಿಯ ವಿರುದ್ಧವಲ್ಲ' ಹೀಗೆಂದು ಎಕ್ಸ್ನಲ್ಲಿ ಬರೆದುಕೊಂಡಿರುವುದು ಸ್ಟಾರ್ ಟಾಲಿವುಡ್ ನಟ ಅಲ್ಲು ಸಿರೀಶ್.
ತೆಲುಗು ಸಿನಿಮಾರಂಗದ ನಟ ಅಲ್ಲು ಸಿರೀಶ್ ಅವರು ದೇವಸ್ಥಾನದಲ್ಲಿ ಸಂಜೆಯಿಂದ, ಮುಂಜಾನೆಯವರೆಗೂ ಹಾಕುವ ಹಾಡಿನಿಂದ ತಮ್ಮ ಅಪಾರ್ಟ್ಮೆಂಟ್ ಹಾಗೂ ಸುತ್ತಮುತ್ತಲಿನ ಜನರಿಗಾಗುತ್ತಿರುವ ಸಮಸ್ಯೆ ಬಗ್ಗೆ ಹೈದರಾಬಾದ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ
'ನಾನು ಶೇಕ್ಪೇಟ್ನ ಅಪರ್ಣಾ ಒನ್ ಸೊಸೈಟಿಯ ನಿವಾಸಿ. ಇಲ್ಲಿಂದ ಕೊಂಚ ದೂರ ವಿನೋಭ ನಗರವಿದೆ. ಇಲ್ಲೊಂದು ಹನುಮಂತನ ದೇಗುಲವಿದೆ. ಗಣೇಶ ಹಬ್ಬ ಮುಗಿದ ನಂತರವೂ ಸಹ ಇಲ್ಲಿ ಬೆಳಗಿನ ಜಾವ 2 ರಿಂದ 3 ಗಂಟೆಯವರೆಗೆ ಹಾಡುಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಈ ಹಿಂದೆ ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
'ಗಣೇಶ ವಿಸರ್ಜನೆ ಇರುವುದರಿಂದ ಸೆಪ್ಟೆಂಬರ್ 25 ರವರೆಗೆ ಸಹಕರಿಸುವಂತೆ ಅವರು ಕೋರಿದ್ದರು. ಹಬ್ಬ ಮುಗಿದಿದ್ದರೂ ಸಹ ಶಬ್ಧಮಾಲಿನ್ಯ ನಿಂತಿಲ್ಲ. ನಮ್ಮ ಅಪಾರ್ಟ್ಮೆಂಟ್ನಲ್ಲಿ ಹಾಗೂ ಸುತ್ತಮುತ್ತಲು ಅನೇಕ ಹಿರಿಯರು, ಮಕ್ಕಳು ಮತ್ತು ಕೆಲಸ ಮಾಡುವ ವೃತ್ತಿಪರರು ಇದರಿಂದ ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ದೂರು ಸಹ ಕೊಟ್ಟಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ 'ನಾನು ಸಹ ಧಾರ್ಮಿಕ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡವನು. ನಾನು ಹನುಮಂತನನ್ನು ಇಷ್ಟದ ದೇವರೆಂದು ಆರಾಧಿಸುತ್ತೇನೆ. ಆದರೆ, ಮುಂಜಾನೆ 2-3 ಗಂಟೆವರೆಗೂ DJ ಸೆಟ್ ಹಾಕಿ ಜೋರಾಗಿ ಹಾಡು ಹಾಕುವುದು ಭಕ್ತಿಯಲ್ಲ'. ಮುಂದುವರೆದು, 'ನಾನು ನಿಮ್ಮ ಭಕ್ತಿ ವಿರುದ್ಧ ದೂರು ಕೊಟ್ಟಿಲ್ಲ. ಸಿವಿಕ್ ಸೆನ್ಸ್ ವಿಚಾರವಾಗಿ ದೂರು ಕೊಟ್ಟಿದ್ದೇನೆ. ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಎಕ್ಸ್ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಹೈದರಾಬಾದ್ ಪೊಲೀಸರು ಅಲ್ಲು ಸಿರೀಶ್ ಅವರ ದೂರಿಗೆ ಪ್ರತಿಕ್ರಿಯೆ ಕೊಟ್ಟಿದ್ದು, 'ಸರ್ ಈ ವಿಚಾರವಾಗಿ ನಾವು ಫಿಲ್ಮ್ ನಗರ ಠಾಣೆಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ' ಎಂದು ಹೇಳಿದ್ದಾರೆ. ಪೊಲೀಸರ ಈ ತಕ್ಷಣ ಪ್ರತಿಕ್ರಿಯೆಗೆ ಅಲ್ಲು ಸಿರೀಶ್ ಧನ್ಯವಾದ ತಿಳಿಸಿದ್ದಾರೆ, (ಏಜೆನ್ಸೀಸ್).