

ಹೈದರಾಬಾದ್: ಅಲ್ಲು ಅರ್ಜುನ್ ಇಲ್ಲಿಯವರೆಗೂ ತಮ್ಮ ಹೊಸ ಚಿತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಕೊಡುತ್ತಲೇ ಇದ್ದರು. ಈ ಬಾರಿ, ಸಹ ಅವರೊಂದು ವಿಷಯವನ್ನು ಹೇಳಿಕೊಂಡಿದ್ದಾರೆ. ಆದರೆ, ಈ ಬಾರಿ ಅವರು ನಟಿಸುತ್ತಿರುವ ಬಗ್ಗೆ ಅಲ್ಲ, ಮಗಳು ಅರ್ಹ ನಟಿಸುತ್ತಿರುವ ಖುಷಿಯನ್ನು ಅವರು ಹಂಚಿಕೊಂಡಿದ್ದಾರೆ.
ಹೌದು, ಅಲ್ಲು ಅರ್ಜುನ್ ಅವರ ಮುದ್ದಿನ ಮಗಳು ಅರ್ಹ ಇದೀಗ ಬಣ್ಣ ಹಚ್ಚುವುದಕ್ಕೆ ಸಿದ್ಧಳಾಗಿದ್ದಾಳೆ. ಈ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನವಳಾಗಿದ್ದಾಳೆ. ಅರ್ಜುನ್ ತಾತ ಅಲ್ಲು ರಾಮಲಿಂಗಯ್ಯ ನಟರಾಗಿ ದೊಡ್ಡ ಹೆಸರು ಮಾಡಿದವರು. ತಂದೆ ಅಲ್ಲು ಅರವಿಂದ್ ದೊಡ್ಡ ನಿರ್ಮಾಪಕರು. ಇನ್ನು ಅರ್ಜುನ್ ಅಲ್ಲದೆ ಅವರ ಸಹೋದರ ಶಿರೀಷ್ ಹೀರೋಗಳಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರ ಮಗಳು ಅರ್ಹ ಸಹ ಚಿತ್ರರಂಗಕ್ಕೆ ಬಂದಿರುವುದು ವಿಶೇಷ.
ಅರ್ಜುನ್ ಮಗಳು ಅರ್ಹ, ಇದೀಗ ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರದಲ್ಲಿ ಅರ್ಹಗೆ ರಾಜಕುಮಾರ ಭರತನ ಪಾತ್ರವಂತೆ. ಇದಕ್ಕೂ ಮುನ್ನ ಅರ್ಜುನ್ ಮತ್ತು ಸಮಂತಾ, 'ಸನ್ ಆಫ್ ಸತ್ಯಮೂರ್ತಿ' ಮತ್ತು 'ದಿ ಪರ್ಫೆಕ್ಟ್ ಜಂಟಲ್ಮ್ಯಾನ್' ಚಿತ್ರಗಳಲ್ಲಿ ನಟಿಸಿದ್ದರು. ಈಗ ಅರ್ಜುನ್ ಮಗಳು ಸಮಂತಾ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.
ಅಲ್ಲು ಕುಟುಂಬಕ್ಕೆ ಇದೊಂದು ಹೆಮ್ಮೆಯ ಕ್ಷಣ ಎಂದು ಹೇಳಿಕೊಂಡಿರುವ ಅರ್ಜುನ್, ಅರ್ಹಗೆ ಅವಕಾಶ ಕೊಟ್ಟ ಗುಣಶೇಖರ್ ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಮಂತಾ ಮತ್ತು 'ಶಾಕುಂತಲಂ' ತಂಡಕ್ಕೆ ಶುಭ ಹಾರೈಸಿದ್ದಾರೆ.