

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ಯಶಸ್ಸು ಗಳಿಸಿದ ‘ಪುಷ್ಪ 1: ದಿ ರೈಸ್’ ಬಳಿಕ ಅಲ್ಲು ಅರ್ಜುನ್‌ಗೆ ಡಿಮ್ಯಾಂಡ್ ಹೆಚ್ಚಾದಂತಿದೆ. ‘ಪುಷ್ಪ 2: ದಿ ರೂಲ್’ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲ ಹಾಗೂ ನಿರೀಕ್ಷೆ ಎರಡು ಪಟ್ಟು ಹೆಚ್ಚಾಗಿದ್ದು, ಮತ್ತೊಂದೆಡೆ ಅಲ್ಲು ಅರ್ಜುನ್ ಸಂಭಾವನೆ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಮೊದಲ ಭಾಗಕ್ಕೆ ಸುಮಾರು 40 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ, ಸೀಕ್ವಲ್‌ಗೆ ಅರ್ಜುನ್ ಸಂಭಾವನೆ ಪಡೆಯದೇ ಬರುವ ಗಳಿಕೆಯಲ್ಲಿ ಶೇರ್ ಕೇಳಿದ್ದಾರಂತೆ. ಸುಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರದ ಒಟಿಟಿ ಹಕ್ಕು ಸುಮಾರು 100 ಕೋಟಿ. ರೂಗಳಿಗೆ ಮಾರಾಟವಾಗಿದೆ ಎನ್ನಲಾಗಿದೆ. ಜತೆಗೆ ಆಡಿಯೊ, ಡಬ್ಬಿಂಗ್, ಸ್ಯಾಟಲೈಟ್ ಹಕ್ಕುಗಳು ಹಾಗೂ ಥಿಯೇಟರ್ ಕಲೆಕ್ಷನ್ ಸೇರಿ ಸುಮಾರು 1000 ಕೋಟಿ. ರೂಗೂ ಅಧಿಕ ಗಳಿಕೆ ಮಾಡುವ ನಿರಿಕ್ಷೆಯಿದೆ. ಇದರಲ್ಲಿ ಶೇ. 33ರಷ್ಟು ಪಾಲು ಅಲ್ಲು ಅರ್ಜುನ್ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವಾದಲ್ಲಿ ಅರ್ಜುನ್ ಸುಮಾರು 330 ಕೋಟಿ. ರೂ ಸಂಭಾವನೆ ಪಡೆದಂತಾಗುತ್ತದೆ. ಆದರೆ, ಇಲ್ಲೊಂದು ಸಣ್ಣ ಲೆಕ್ಕಾಚಾರವಿದೆ.
1000 ಕೋಟಿ ರೂ. ಗಳಿಗೂ ಅಧಿಕ ಕಲೆಕ್ಷನ್ ಮಾಡಿದರೂ, ವಿತರಕರು ಹಾಗೂ ಇತರ ವೆಚ್ಚಗಳನ್ನು ಕಳೆದಾಗ ನಿರ್ಮಾಪಕರಿಗೆ ಸುಮಾರು 450-500 ಕೋಟಿ ರೂ. ಉಳಿದುಕೊಳ್ಳಬಹುದು. ಆಗ ಅರ್ಜುನ್‌ಗೆ ಸುಮಾರು 150 ಕೋಟಿ ರೂ. ಸಂಭಾವನೆ ಸಿಗುತ್ತದೆ ಎನ್ನಲಾಗಿದೆ. ಅಂದಹಾಗೆ, ಮುಂದಿನ ವರ್ಷ ಆ.15ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. -ಏಜೆನ್ಸೀಸ್