

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಸುಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ 2021ರ ಹಿಟ್ "ಪುಷ್ಪ : ದ ರೈಸ್' ಚಿತ್ರದ ಸೀಕ್ವಲ್ "ಪುಷ್ಪ : ದ ರೂಲ್'. ಪ್ರಾರಂಭದಿಂದಲೂ ಸಿನಿಮಾ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ 6 ನಿಮಿಷಗಳ ಗಂಗಮ್ಮ ಜಾತ್ರೆ ಮತ್ತು ಕ್ಲೆಮ್ಯಾಕ್ಸ್ ಸನ್ನಿವೇಶಕ್ಕೆ ಬರೋಬ್ಬರಿ 60 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ "ಪುಷ್ಪ 2' ಬಳಿಕ "ಪುಷ್ಪ 3: ದ ರೋರ್' ಕೂಡ ಬರಲಿದೆ ಎಂದೂ ಹೇಳಲಾಗಿದೆ.
ಇದೀಗ ರಿಲೀಸ್ಗೆ ನಾಲ್ಕು ತಿಂಗಳು ಇರುವಾಗಲೇ "ಪುಷ್ಪ 2' ಹೆಸರಿಗೆ ತಕ್ಕಂತೆ ರಿಲೀಸ್ಗೂ ಮುನ್ನವೇ ವ್ಯವಹಾರದ ವಿಷಯದಲ್ಲಿ "ರೂಲ್' ಮಾಡುತ್ತಿದೆ. ಮೂಲಗಳ ಪ್ರಕಾರ ನೆಟ್ಫ್ಲಿಕ್ಸ್ ಬರೋಬ್ಬರಿ 275 ಕೋಟಿ ರೂ. ನೀಡಿ ಈ ಚಿತ್ರದ ಒಟಿಟಿ ಹಕ್ಕುಗಳನ್ನು ಖರೀದಿ ಮಾಡಿದೆಯಂತೆ. ಹಾಗೇ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿತರಣಾ ಹಕ್ಕುಗಳು 300 ಕೋಟಿ ರೂ.ಗಳಿಗೆ, ಉತ್ತರ ಭಾರತದಲ್ಲಿ ಹಿಂದಿ ವಿತರಣೆ ಹಕ್ಕುಗಳು 200 ಕೋಟಿ ರೂ.ಗೆ, ವಿದೇಶಗಳಲ್ಲಿ ರಿಲೀಸ್ ಮಾಡಲು 100 ಕೋಟಿ ರೂ. ನೀಡಿ ವಿತರಣಾ ಹಕ್ಕುಗಳನ್ನು ಖರೀದಿಸಲಾಗಿದೆ ಎನ್ನಲಾಗಿದೆಯಂತೆ.
ಮತ್ತೊಂದೆಡೆ ಆಡಿಯೋ ಮತ್ತು ಟಿವಿ ರೈಟ್ಸ್ ಕೂಡ 200 ಕೋಟಿ ರೂ.ಗೆ ಸೇಲ್ ಆಗಿದೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅಂದಹಾಗೆ "ಪುಷ್ಪ 2: ದ ರೂಲ್' ಇದೇ ಆ. 15ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.