

ಹರ್ಷವರ್ಧನ್ ಬ್ಯಾಡನೂರು
ಚಿತ್ರ: ಪುಷ್ಪ 2: ದ ರೂಲ್
ನಿರ್ದೇಶನ: ಸುಕುಮಾರ್
ನಿರ್ಮಾಣ: ನವೀನ್, ರವಿಶಂಕರ್
ತಾರಾಗಣ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ರಾವ್ ರಮೇಶ್, ಸುನಿಲ್, ಜಗಪತಿ ಬಾಬು ಮುಂತಾದವರು.
"ಪುಷ್ಪ 1: ದ ರೈಸ್'ನಲ್ಲಿ ಕಾಡುಗಳ್ಳ ಪುಷ್ಪರಾಜ್ (ಅರ್ಜುನ್) ಮತ್ತು ಎಸ್ಪಿ ಭನ್ವರ್ ಸಿಂಗ್ ಶೇಖಾವತ್ (ಫಹದ್) ನಡುವಿನ ಸಮರದ ಜತೆ ಪುಷ್ಪ ಮತ್ತು ಶ್ರೀವಲ್ಲಿ (ರಶ್ಮಿಕಾ) ಮದುವೆಯಾಗುವ ಮೂಲಕ ಕಥೆ ಮುಗಿಯುತ್ತದೆ. ಇದೀಗ "ಪುಷ್ಪ 2: ದ ರೂಲ್'ನಲ್ಲಿ ರಕ್ತಚಂದನ ಮರಗಳ ಕಳ್ಳ ಪುಷ್ಪರಾಜ್ ಕೋಟಿ ಕೋಟಿ ದುಡ್ಡು ಮಾಡಿ ಬಂಗಲೆ ಪ್ರವೇಶಿಸಿರುತ್ತಾನೆ. ಸ್ಥಳಿಯ ಸಂಸದನ ಜತೆ ಗೆಳೆತನ, ಆ ಜಿಲ್ಲೆಯ ಜನರ ಜತೆ ಉತ್ತಮ ಸಂಬಂಧ ಹೊಂದಿರುತ್ತಾನೆ. ಆದರೆ, ಎಸ್ಪಿ ಜತೆಗಿನ ಗುದ್ದಾಟ ಮುಂದುವರಿದಿರುತ್ತದೆ. ಹಾಗೇ ಕಾಡುಗಳ್ಳರ ಸಿಂಡಿಕೇಟ್ನ ಅಧ್ಯಕ್ಷನಾಗಿರುವ ಪುಷ್ಪನ ವಿರುದ್ಧ ಕೆಲ ಸದಸ್ಯರೇ ಹೊಂಚು ಹಾಕುತ್ತಿರುತ್ತಾರೆ.
ಗಂಡ, ಹೆಂಡತಿ ಒಬ್ಬರನ್ನೊಬ್ಬರು ಮುಟ್ಟಿದಾಗಲೆಲ್ಲ "ಪೀಲಿಂಗ್ಸ್' ಶುರುವಾಗುವ, ಪತ್ನಿಯ ಮೇಲಿನ ಪ್ರೀತಿಗಾಗಿ ರಾಜ್ಯದ ಮುಖ್ಯಮಂತ್ರಿಯನ್ನೇ ಬದಲಿಸುವ, ಅದೇ ಗರ್ಭಿಣಿ ಪತ್ನಿಯ ಮುಂದೆ "ಕಿಸ್ಸಕ್ ಕಿಸ್ಸಕ್' ಅಂತ ಡಾನ್ಸರ್ಅನ್ನು ಸೊಂಟದ ಮೇಲೆ ಕೂರಿಸಿಕೊಳ್ಳುವ, ಗಂಗಮ್ಮ ತಾಯಿ ವೇಷದಲ್ಲಿ ಒಂದು ಭಕ್ತೀಗಿತೆಯ ಮಾಂಟೇಜ್ ಮತ್ತೊಂದು "ಸಾಮಿ ಸಾಮಿ' ಡೂಯೆಟ್, ಇನ್ನೊಂದು ಫೈಟ್ ಮಾಡುವ, ಜಪಾನ್ನಲ್ಲಿ ಟಾರ್ಜನ್ನಂತೆ ಹಾರುವ, ಮಾಲ್ಡೀವ್ಸ್ನಲ್ಲಿ ಐದು ಸಾವಿರ ಕೋಟಿ ರಕ್ತಚಂದನದ ಡೀಲ್ ನಡೆಸುವ, ಶ್ರೀಲಂಕಾದಲ್ಲಿ ಹೆಲಿಕಾಪ್ಟರ್ನಿಂದ ಇಳಿಯುವ, ಕೈಕಾಲು ಕಟ್ಟಿದ್ದರೂ ಎಗರಿ ಎಗರಿ ಕಚ್ಚುವ ಪುಷ್ಪರಾಜನ ಬಿಲ್ಡಪ್ನಲ್ಲೇ ಸಿನಿಮಾ ಕಳೆದುಹೋಗಿಬಿಡುತ್ತದೆ.
200 ನಿಮಿಷಗಳ ಈ ಸುದೀರ್ಘ ಬಿಲ್ಡಪ್ ಕಹಾನಿಗೆ ಸುಕುಮಾರ್ ಕಣ್ಣುಮುಚ್ಚಿಕೊಂಡು ಕೂತಿದ್ದರೂ ಸಲೀಸಾಗಿ ಒಂದು ತಾಸು ಕತ್ತರಿ ಹಾಕಿಬಿಡಬಹುದಿತ್ತು. ಕಥೆಯಲ್ಲಿ 5000 ಕೋಟಿ ರೂ. ಡೀಲ್ಗಾಗಿ ಪುಷ್ಪರಾಜ್ ದೇಶಾದ್ಯಂತ ಕಾಡುಗಳನ್ನು ಕೊಳ್ಳೆ ಹೊಡೆಯುತ್ತಿದ್ದರೆ, ಇತ್ತ ನಿಜ ಜೀವನದಲ್ಲಿ ದುಪ್ಪಟ್ಟು ಟಿಕೆಟ್ ದರ ತೆತ್ತು ಸಿನಿಮಾ ನೋಡುತ್ತಿರುವ ಪ್ರೇಕ್ಷಕ ಜೇಬು ಮುಟ್ಟಿ ನೋಡಿಕೊಂಡರೂ ಆಶ್ಚರ್ಯವಿಲ್ಲ. ಅಲ್ಲು ಅರ್ಜುನ್ ಈ ಸೀಕ್ವೆಲ್ನಲ್ಲಿ ಮೊದಲ ಭಾಗಕ್ಕಿಂತ ಎರಡಿಂಚು ಹೆಚ್ಚೇ ಎಡಭುಜ ಎತ್ತಿದ್ದಾರೆ! ಆ್ಯಕ್ಷನ್ನಷ್ಟೇ ಎಮೋಷನಲ್ ಸನ್ನಿವೇಶಗಳಲ್ಲೂ ಮಿಂಚಿದ್ದಾರೆ.
ಅವರಿಗೆ ಫಹದ್ ಖಡಕ್ಕಾಗಿ ಸವಾಲು ಹಾಕಿದ್ದು, ಅದೇ ಕಾರಣಕ್ಕೇ ಅಲ್ಲಲ್ಲಿ ಅವರಿಗೆ ಬ್ರೇಕ್ ನೀಡಲಾಗಿದೆ. ಈ ಮದಗಜಗಳ ಕಾದಾಟದ ನಡುವೆಯೂ ರಶ್ಮಿಕಾ ಮಂದಣ್ಣ ತಮ್ಮ ಪರ್ಫಾರ್ಮೆನ್ಸ್ನಲ್ಲಿ ಎದ್ದು ನಿಲ್ಲುತ್ತಾರೆ. ಎಲ್ಲ ಸೀನ್ಗಳಲ್ಲೂ ಒಂದು ಪೀಕ್ ಮೊಮೆಂಟ್ ಇರುವುದು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಕಮರ್ಷಿಯಲ್ ಆ್ಯಕ್ಷನ್ ಮಸಾಲಾ ಪ್ರಿಯರಿಗೆ "ಪುಷ್ಪ 2' ಇಷ್ಟವಾಗಲಿದೆ. ಕಂಟೆಂಟ್ ನಿರೀಸುವವರಿಗೆ ಕಿರಿಕಿರಿ ಕಟ್ಟಿಟ್ಟ ಬುತ್ತಿ.