

ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಸದ್ಯ ‘ಅಲಾ ವೈಕುಂಠಪುರಮುಲೋ’ ಚಿತ್ರದ ಸಕ್ಸಸ್ನಲ್ಲಿದ್ದಾರೆ. ಈ ಚಿತ್ರದ ನಿರ್ದೇಶಕ ಸುಕುಮಾರ್ ಜತೆ ಮತ್ತೊಂದು ಸಿನಿಮಾದ ಶೂಟಿಂಗ್ನಲ್ಲಿ ಬಿಜಿ ಆಗಿದ್ದಾರೆ. ಈ ಮಧ್ಯೆ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ಜತೆ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಅಲ್ಲು ಅರ್ಜುನ್ಗಾಗಿಯೇ ಮುರುಗದಾಸ್ ಕಥೆ ರೆಡಿ ಮಾಡಿಕೊಂಡಿದ್ದು, ಈ ಬಗ್ಗೆ ಅವರಿಗೆ ತಿಳಿಸಿದ್ದಾರಂತೆ. ಅಲ್ಲದೆ, ಸ್ಟೈಲಿಶ್ ಸ್ಟಾರ್ಗೂ ಕಥೆ ಇಷ್ಟವಾಗಿದ್ದು, ನಿರ್ದೇಶಕ ಸುಕುಮಾರ್ ಜತೆಗಿನ ಸಿನಿಮಾ ಮುಗಿದ ಬಳಿಕ ಮುರುಗದಾಸ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ಮುರುಗದಾಸ್ ಭಾರತದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು.
ಹಿಂದಿಯ ‘ಘಜಿನಿ’, ತಮಿಳಿನ ‘ತುಪಾಕಿ’, ‘ಕತ್ತಿ’, ‘ಸರ್ಕಾರ್’ ಸೂಪರ್ ಹಿಟ್ ಚಿತ್ರ ಕೊಟ್ಟಿರುವ ಇವರು, ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ದರ್ಬಾರ್’ ಚಿತ್ರ ನಿರ್ದೇಶಿಸಿದ್ದರು. ಆದರೆ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿತ್ತು. ಹೀಗಾಗಿ ಮುರುಗದಾಸ್ ಜತೆ ಅಲ್ಲು ಚಿತ್ರ ಮಾಡುವುದಿಲ್ಲ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಅಲ್ಲುಗೆ ಕಥೆ ಇಷ್ಟವಾಗಿದ್ದು, ಒಟ್ಟಿಗೆ ಸಿನಿಮಾ ಮಾಡೋಣ ಎಂದಿದ್ದಾರಂತೆ. ಈ ಹಿಂದೆ ತೆಲುಗಿನಲ್ಲಿ ಚಿರಂಜೀವಿ ಮತ್ತು ಮಹೇಶ್ ಬಾಬು ಚಿತ್ರಗಳಿಗೆ ಮುರುಗದಾಸ್ ಆಕ್ಷನ್-ಕಟ್ ಹೇಳಿದ್ದರು. ಸದ್ಯ ಮಹಿಳಾ ಪ್ರಧಾನ ಕಥೆಯ ‘ರಾಂಗಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಖ್ಯಾತ ನಟಿ ತ್ರಿಶಾ ಈ ಚಿತ್ರದ ನಾಯಕಿ. -ಏಜೆನ್ಸೀಸ್