

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪ್ರಿ-ರಿಲಿಸ್ ಇವೆಂಟ್ನಲ್ಲಿ ಇಂದು ಮತ್ತೊಮ್ಮೆ ಅಪ್ಪು ಸೆಂಟಿಮೆಂಟ್ ಅನಾವರಣಗೊಂಡಿತು. ಪುನೀತ್ ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿ ಕುಟುಂಬದ ಬಹುತೇಕ ಎಲ್ಲರೂ ಗದ್ಗದಿತರಾಗಿ ಅತ್ತರೆ, ಚಿತ್ರರಂಗದ ಗಣ್ಯರನೇಕರು ಕೂಡ ಭಾವುಕರಾಗಿ ಮಾತನಾಡಿದರು.
ಪುನೀತ್ ಜನ್ಮದಿನವಾದ ಮಾ. 17ರಂದು ಬಿಡುಗಡೆ ಆಗಲಿರುವ ಜೇಮ್ಸ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಜೆಯಿಂದಲೇ ಆರಂಭಗೊಂಡಿದ್ದು, ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಮಾರಂಭಕ್ಕೆ ರಾಜ್ ಕುಟುಂಬ ಸದಸ್ಯರಲ್ಲದೆ, ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದಾರೆ.
ಅಪ್ಪು ಹಾಡಿಗೆ ಡ್ಯಾನ್ಸರ್ ವೇದಿಕೆ ಮೇಲೆ ಹೆಜ್ಜೆ ಹಾಕುವಾಗ ರಾಘವೇಂದ್ರ ರಾಜಕುಮಾರ್ ಅವರ ಪತ್ನಿ ಮಂಗಳಾ ಎಲ್‌ಇಡಿ ಸ್ಕ್ರೀನ್ ಮೇಲೆ ಅಪ್ಪುವಿನ ಡ್ಯಾನ್ಸ್ ನೋಡಿ ಪುನೀತ್ ಅವರನ್ನು ನೆನೆದು ನೆನೆದು ಕಣ್ಣೀರು ಹಾಕಿದರು.
ಅಪ್ಪುಇಲ್ಲದೆ ನನಗೆ ಇರೋದಕ್ಕೆ ಆಗ್ತಿಲ್ಲ, ನಾನು ಅಪ್ಪುನ ಹುಡುಕಿಕೊಂಡು ಹೋಗ್ತೀನಿ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದಾಗ ಶಿವರಾಜ್ಕುಮಾರ್ ಕೂಡ ಅತ್ತರು. ನಗ್ತಾ ಇರ್ತೀವಿ, ಶೂಟಿಂಗ್ ಮಾಡ್ತೀವಿ, ಎಲ್ಲಾ ಮಾಡ್ತೀವಿ. ಆದ್ರೆ ಒಳಗಡೆ ನೋವು ಇದೆ, ಅದನ್ನು ತಡಿಯೋಕೆ ಆಗ್ತಿಲ್ಲ. ಈ ಥರ ಒಂದು ಟೈಮ್ ಬರುತ್ತಾ ಅಂತ ಅಂದ್ಕೊಂಡಿರ್ಲಿಲ್ಲ ಎಂದು ಶಿವರಾಜ್ಕುಮಾರ್ ವೇದಿಕೆ ಮೇಲೆ ಕಣ್ಣೀರು ಹಾಕಿದರು.