ಆಲಿಯಾ-ರಣಬೀರ್​ ಮಗಳ ಹೆಸರು ಬಹಿರಂಗ: "ರಹಾ" ಹೆಸರಿನಲ್ಲಿರುವ ಅನೇಕ ಅರ್ಥಗಳು ಹೀಗಿವೆ ನೋಡಿ…

Alia Bhatt
Published on

ಮುಂಬೈ: ಬಾಲಿವುಡ್​ ನಟಿ ಆಲಿಯಾ ಭಟ್​ ನ.06 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟ ರಣಬೀರ್​ ಕಪೂರ್​ ತಂದೆಯಾಗಿ ಬಡ್ತಿ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಮಗಳನ್ನು ತುಂಬಾ ಜೋಪಾನ ಮಾಡುತ್ತಿರುವ ಆಲಿಯಾ, ಮಗಳನ್ನು ನೋಡಲು ಯಾರೇ ಬಂದರೂ ಕೋವಿಡ್​ ಟೆಸ್ಟ್​ ಕಡ್ಡಾಯ ಮಾಡಿದ್ದಾರೆ. ಇದರ ನಡುವೆ ಆಲಿಯಾ ಮಗಳ ಹೇಸರೇನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ಇದೀಗ ಆ ಕುತೂಹಲಕ್ಕೆ ಸ್ವತಃ ಆಲಿಯಾರೇ ತೆರೆ ಎಳೆದಿದ್ದಾರೆ.

ಆಲಿಯಾ ಮತ್ತು ರಣಬೀರ್​ ಅವರ ಮುದ್ದಿನ ಮಗಳಿಗೆ "ರಹಾ" ಎಂದು ಹೆಸರಿಡಲಾಗಿದೆ. ಈ ಹೆಸರನ್ನು ರಣಬೀರ್​ ಅವರ ತಾಯಿ ನೀತು ಕಪೂರ್ ಸೂಚಿಸಿದ್ದಾರೆ. ರಾಹಾ ಎಂಬ ಹೆಸರು ಅನೇಕ ಸುಂದರವಾದ ಅರ್ಥಗಳನ್ನು ಹೊಂದಿದೆ ಎಂದಿರುವ ಆಲಿಯಾ, ರಹಾ ಎಂದರೆ, ಶುದ್ಧ ರೂಪದಲ್ಲಿ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂದಾದರೆ, ಸಂಸ್ಕೃತದಲ್ಲಿ ರಹಾ ಎಂದರೆ ಒಂದು ಕುಲ ಎಂದರ್ಥ. ಬಂಗಾಳದಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದು ಅರ್ಥವಿದ್ದರೆ, ಅರೆಬಿಕ್​ನಲ್ಲಿ ಶಾಂತಿ ಎಂದರ್ಥ.

ಇದಿಷ್ಟೇ ಅಲ್ಲದೆ, ಇದು ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂಬ ಅರ್ಥವನ್ನು ಕೊಡುತ್ತದೆ. ಇದಿಷ್ಟು ಕೂಡ ನಿಜ. ನಾವು ಅವಳನ್ನು (ರಹಾ) ಹಿಡಿದ ಮೊದಲ ಕ್ಷಣದಿಂದ ನಾವು ಎಲ್ಲವನ್ನೂ ಅನುಭವಿಸಿದ್ದೇವೆ. ನಮ್ಮ ಕುಟುಂಬವನ್ನು ಜೀವಂತಗೊಳಿಸಿದ್ದಕ್ಕಾಗಿ ಧನ್ಯವಾದಗಳು ರಹಾ. ನಮ್ಮ ಜೀವನವು ಈಗಷ್ಟೇ ಪ್ರಾರಂಭವಾಗಿವಂತೆ ಅನಿಸುತ್ತದೆ ಎಂದು ಆಲಿಯಾ ಇನ್​ಸ್ಟಾಗ್ರಾಂನಲ್ಲಿ ಮಗಳ ಹೆಸರನ್ನು ಬಹಿರಂಗಗೊಳಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ರಹಾ ಕಪೂರ್ ನಾನು ನಿನ್ನನ್ನು ಹಿಡಿದಿಟ್ಟುಕೊಳ್ಳಬಹುದೇ, ನನಗೆ ಕಾಯಲು ಸಾಧ್ಯವಿಲ್ಲ ಎಂದು ಆಲಿಯಾ ಹೇಳಿದ್ದಾರೆ. ಆಲಿಯಾರ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಸಾಕಷ್ಟು ಅಭಿನಂದನೆಗಳು ಬಂದಿವೆ.

ಅಂದಹಾಗೆ ನ.6ರಂದು ಬೆಳಗ್ಗೆ 7 ಗಂಟೆಗೆ ಹೆರಿಗೆಗೆಂದು ಆಲಿಯಾ ಭಟ್​, ಮುಂಬೈನಲ್ಲಿರುವ ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 12.05ರ ಸಮಯಕ್ಕೆ ಮಗು ಜನಿಸಿತು.

ಈ ವರ್ಷದ ಏಪ್ರಿಲ್​ನಲ್ಲಿ ಆಲಿಯಾ ಮತ್ತು ರಣಬೀರ್​ ಇಬ್ಬರು ಮದುವೆ ಆಗಿದ್ದರು. ಜೂನ್​ ತಿಂಗಳಲ್ಲಿ ಆಲಿಯಾ, ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಇನ್​ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದ್ದರು. ಕಳೆದ ತಿಂಗಳು ಮುಂಬೈನಲ್ಲಿರುವ ಆಲಿಯಾ ಮತ್ತು ರಣಬೀರ್​ ಮನೆಯಲ್ಲಿ ಫ್ರೆಂಡ್ಸ್​ ಎಲ್ಲ ಸೇರಿ ಸೀಮಂತ ಕಾರ್ಯಕ್ರಮ ನಡೆಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net