

| ಚೇತನ್ ನಾಡಿಗೇರ್
‘ಅಮ್ಮ, ತಪಸ್ಸು ಮಾಡಿದರೆ ದೇವರು ಪ್ರತ್ಯಕ್ಷನಾಗುತ್ತಾನಾ?’ ಹೀಗೆ ಮುಗ್ಧವಾಗಿ ತನ್ನಮ್ಮನನ್ನು ಕೇಳುತ್ತಾನೆ ರಾಮು. ಒಂದು ಪಕ್ಷ, ಅದು ಸಾಧ್ಯವಾಗುತ್ತದೆ ಎಂದರೆ ಕಠೋರ ತಪಸ್ಸು ಮಾಡಿಬಿಡುತ್ತಿದ್ದನೇನೋ? ದೇವರು ಪ್ರತ್ಯಕ್ಷನಾದ ಮೇಲೆ ತನ್ನ ಕಣ್ಣಿಲ್ಲದ ತಂಗಿಗೆ ದೃಷ್ಟಿ ಕೊಡು ಎಂದು ಬೇಡುತ್ತಿದ್ದನೇನೋ ಏನೋ? ಅದು ಸಾಧ್ಯವಾಗದಿದ್ದರೂ ಅವನು ಪ್ರಯತ್ನ ಬಿಡುವುದಿಲ್ಲ. ಹೇಗಾದರೂ ತನ್ನ ತಂಗಿಗೆ ದೃಷ್ಟಿ ಬರಲಿ ಎಂದು ಹಪಹಪಿಸುತ್ತಾನೆ. ಪ್ರತಿದಿನ ವೈದ್ಯರನ್ನು ಭೇಟಿ ಮಾಡಿ, ಅವಳಿಗೆ ಆಪರೇಷನ್ ಯಾವಾಗ ಎಂದು ಕೇಳುತ್ತಿರುತ್ತಾನೆ. ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿರುತ್ತಾನೆ. ಅವನ ತಪಸ್ಸು ಫಲಿಸುತ್ತದಾ? ಉತ್ತರಕ್ಕಾಗಿ ‘ಅಕ್ಷಿ’ಯನ್ನು ನೋಡಲೇಬೇಕು. ‘ಅಕ್ಷಿ’ಎಂಬ ಹೆಸರೇ ಹೇಳುವಂತೆ ಕಣ್ಣಿನ ಕುರಿತಾದ ಚಿತ್ರ. ನೇತ್ರದಾನ ಎಷ್ಟು ಮುಖ್ಯ ಎಂದು ಸಾರುವಂತಹ ಚಿತ್ರ. ಕಣ್ಣುಗಳನ್ನು ಸುಡಬೇಡಿ, ಅದನ್ನು ಬೇರೆಯವರಿಗೆ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಎಂದು ಇನ್ನೊಬ್ಬರಿಗೆ ಅರಿವು ಮೂಡಿಸುವಂತಹ ಚಿತ್ರ. ಹೊಡಿ-ಬಡಿ-ಕಡಿ ಚಿತ್ರಗಳ ಮಧ್ಯೆ, ರಕ್ತಪಾತ-ಕ್ರೌರ್ಯದ ಮಧ್ಯೆ ನಿಜಕ್ಕೂ ವಿಭಿನ್ನವಾಗಿ ನಿಲ್ಲುವಂತಹ ಚಿತ್ರ.
ಒಂದು ಪುಟ್ಟ ಊರು. ಅಲ್ಲೊಂದು ಚಿಕ್ಕ ಕುಟುಂಬ. ಆ ಕುಟುಂಬದಲ್ಲೊಬ್ಬ ಅಂಧ ಹುಡುಗಿ. ಆ ಹುಡುಗಿಗೆ ಕಣ್ಣು ತರಿಸುವುದಕ್ಕೆ ತಂದೆ, ತಾಯಿ, ಅಣ್ಣ ಏನೆಲ್ಲ ಮಾಡುತ್ತಾರೆ ಮತ್ತು ನೇತ್ರದಾನದ ಮಹತ್ವವನ್ನು ಹೇಗೆ ಇಡೀ ಊರಿಗೇ ಅರ್ಥ ಮಾಡಿಸುತ್ತಾರೆ ಎನ್ನುವುದು ಚಿತ್ರದ ಕಥೆ. ನೇತ್ರದಾನ ಕುರಿತಾಗಿ ಕೆಲವು ಚಿತ್ರಗಳಲ್ಲಿ ದೃಶ್ಯಗಳಿರಬಹುದು. ಆದರೆ, ನೇತ್ರದಾನವನ್ನೇ ಆಧರಿಸಿ ಯಾವುದೇ ಚಿತ್ರ ಇದುವರೆಗೂ ಕನ್ನಡದಲ್ಲಿ ಬಂದಿರಲಿಲ್ಲ. ಅಂಥದ್ದೊಂದು ಕೊರತೆಯನ್ನು ‘ಅಕ್ಷಿ’ ತುಂಬಿದೆ.
ಈ ಚಿತ್ರದ ಉದ್ದೇಶ ಮತ್ತು ಸಂದೇಶ ಅದ್ಭುತವೇ. ಆದರೆ, ಈ ಚಿತ್ರವನ್ನೂ ಇನ್ನಷ್ಟು ಚುರುಕಾಗಿಸಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರವನ್ನು ಅಗತ್ಯಕ್ಕಿಂತ ಹೆಚ್ಚು ಎಳೆಯಲಾಗಿದೆ. ಈ ತರಹದ ಕೆಲವು ಆಕ್ಷೇಪಗಳ ಹೊರತಾಗಿ, ‘ಅಕ್ಷಿ’ ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಗದ್ಗದಿತರಾಗುವಂತೆ ಮಾಡುತ್ತದೆ. ಹಾಗೆ ಮಾಡುವುದು ಬರೀ ಚಿತ್ರಕಥೆಯಷ್ಟೇ ಅಲ್ಲ, ಕಲಾವಿದರ ಪಾಲು ಸಹ ದೊಡ್ಡದಿದೆ. ಗೋವಿಂದೇಗೌಡ, ಇಳಾ ವಿಟ್ಲ, ಮಾಸ್ಟರ್ ಮಿಥುನ್, ಬೇಬಿ ಸೌಮ್ಯ, ಕಲಾದೇಗುಲ ಶ್ರೀನಿವಾಸ್ ಹೀಗೆ ಎಲ್ಲರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಡುಗಳಲ್ಲಿನ ಸಾಹಿತ್ಯ ಬಹಳ ಅರ್ಥಗರ್ಭಿತವಾಗಿದೆ.