

‘ಗುಡ್ ನ್ಯೂಸ್’ ಸಿನಿಮಾಗೆ ಬಂದಿರುವ ಕೆಲವು ವಿಮರ್ಶಾತ್ಮಕ ಅಭಿಪ್ರಾಯಗಳು ಅದರ ನಾಯಕ ನಟ ಅಕ್ಷಯ್ ಕುಮಾರ್ ಅವರಿಗೆ ‘ಗುಡ್ ನ್ಯೂಸ್’ ಅನಿಸಿಲ್ಲ. ಹೀಗಾಗಿ ಆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸಿನಿಮಾವನ್ನು ಸಿನಿಮಾ ಥರವೇ ನೋಡಿ ಎಂಬುದಾಗಿ ಹೇಳಿದ್ದಾರೆ.
ರಾಜ್ ಮೆಹ್ತ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್, ಕರೀನಾ ಕಪೂರ್, ದಿಲ್ಜಿತ್ ದೊಸಂಜ್, ಕಿಯಾರಾ ಆಡ್ವಾಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಗುಡ್ ನ್ಯೂಸ್’ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಇನ್ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಸಂದರ್ಭದಲ್ಲಿ ಆಗುವ ಒಂದು ಎಡವಟ್ಟನ್ನೇ ಆಧರಿಸಿದ ಕಥಾಹಂದರ ಇದರಲ್ಲಿದ್ದು, ತಾಯ್ತನ, ದತ್ತು ಪಡೆಯುವುದು, ಗರ್ಭಪಾತ ಮುಂತಾದವುಗಳ ಬಗ್ಗೆ ಸಾಕಷ್ಟು ಡೈಲಾಗ್ಸ್ ಈ ಚಿತ್ರದಲ್ಲಿವೆ.
ಅವುಗಳಲ್ಲಿ ಕೆಲವುಗಳ ಬಗ್ಗೆ ಸಿನಿಪ್ರಿಯರಿಂದ ತೀವ್ರ ಟೀಕೆಗಳು ಎದುರಾಗಿದ್ದು. ಅವೆಲ್ಲದರ ಬಗ್ಗೆ ಬಾಯ್ಬಿಟ್ಟಿರುವ ಅಕ್ಷಯ್ ಕುಮಾರ್, ‘ಸಿನಿಮಾಗಳನ್ನು ಸಿನಿಮಾ ರೀತಿಯಲ್ಲೇ ನೋಡಿ, ಅದನ್ನು ಬಗೆದು ನೋಡಬೇಡಿ..’ ಎಂದು ಸ್ವಲ್ಪ ಅಸಮಾಧಾನದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ‘ಸಿನಿಮಾದಲ್ಲಿ ಪಾತ್ರಗಳು ಮಾತನಾಡುತ್ತವೆ. ಪಾತ್ರಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಡೈಲಾಗ್ಸ್ ಇರುತ್ತವೇ ಹೊರತು ಅವು ನಮ್ಮ ಮಾತುಗಳಲ್ಲ’ ಎಂದು ನಿಷ್ಠುರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆಯನ್ನೇ ಕಾಣುತ್ತಿದೆ. ಡಿ.27ಕ್ಕೆ ಬಿಡುಗಡೆ ಆಗಿರುವ ‘ಗುಡ್ ನ್ಯೂಸ್’, ಮೊದಲ ದಿನವೇ 17.56 ಕೋಟಿ ರೂ. ಗಳಿಸಿದೆ. ಶನಿವಾರ 21.78 ಕೋಟಿ ರೂ. ಗಳಿಸಿರುವ ಈ ಚಿತ್ರ ಮೊದಲ ವಾರಾಂತ್ಯದಲ್ಲೇ ಒಟ್ಟು 65.99 ಕೋಟಿ ರೂ. ಕಲೆಕ್ಷನ್ ಕಂಡಿದೆ. (ಏಜೆನ್ಸೀಸ್)