ಮರಾಠಿ ಚಿತ್ರರಂಗಕ್ಕೆ ಅಕ್ಷಯ್​ ಕುಮಾರ್; ಛತ್ರಪತಿ ಶಿವಾಜಿಯಾಗಿ ನಟನೆ

Akshay Kumar - Shivaji (1)
Published on

ಮುಂಬೈ: ಅಕ್ಷಯ್​ ಕುಮಾರ್​ ಕೈಯಲ್ಲಿ 'ಸೆಲ್ಫಿ', 'ಓ ಮೈ ಗಾಡ್​ 2', 'ಕ್ಯಾಪ್ಸೂಲ್​ ಗಿಲ್​', 'ಸೂರರೈ ಪೊಟ್ರು' ಚಿತ್ರದ ರೀಮೇಕ್​ ... ಹೀಗೆ ಒಂದಿಷ್ಟು ಚಿತ್ರಗಳು ಇವೆ. ಇದೆಲ್ಲದರ ಮಧ್ಯೆ, ಅಕ್ಷಯ್​ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, 'ವೀರ್​ ದೌದಲೆ ಸಾಥ್​' ಎಂಬ ಹೊಸ ಮರಾಠಿ ಚಿತ್ರದಲ್ಲಿ ಛತ್ರಪತಿ ಶಿವಜಿ ಮಹರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಮುಂಬೈನಲ್ಲಿ ಬುಧವಾರ ರಾತ್ರಿ ನಡೆದ ಸಮಾರಂಭದಲ್ಲಿ, ಮಹೇಶ್​ ಮಂಜ್ರೇಕರ್​ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅವರು ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯವಿರಲಿ, ಚಿತ್ರದ ಘೋಷಣೆ ಸಮಾರಂಭದಲ್ಲಿ ಅವರು ಭಾಗವಹಿಸಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲೂ ಅಕ್ಷಯ್​ ಕುಮಾರ್​ ಅವರ ಹೆಸರು ಇರಲಿಲ್ಲ. ಹೀಗಿರುವಾಗಲೇ, ಅಕ್ಷಯ್​ ಸಮಾರಂಭಕ್ಕೆ ಹಾಜರಾಗುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದರು. ಕಡೆಗೆ ಗೊತ್ತಾಗಿದ್ದೇನೆಂದರೆ, ಈ ಚಿತ್ರದಲ್ಲಿ ಶಿವಾಜಿ ಮಹಾರಾಜರ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎಂದು.

ಈ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್​ ಥಾಕರೆ ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.

'ವೀರ್​ ದೌದಲೆ ಸಾಥ್​' ಚಿತ್ರವು ಬರೀ ಮರಾಠಿಗಷ್ಟೇ ಸೀಮಿತವಾಗಿರುವುದಿಲ್ಲ. ಹಿಂದಿ, ತಮಿಳು ಮತ್ತು ತೆಲುಗಿಗೂ ಡಬ್​ ಆಗಿ ಬಿಡುಗಡೆ ಆಗಲಿದೆ. ವಸೀಮ್​ ಖುರೇಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 2023ರ ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net