

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ‘ಲಕ್ಷ್ಮೀ ಬಾಂಬ್’ ಚಿತ್ರದ ಟೀಸರ್ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿದವರೆಲ್ಲ ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಎನ್ನದೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸರಿಯಾಗಿ, ಕೇವಲ 24 ಗಂಟೆಗಳಲ್ಲಿ ಈ ಟ್ರೇಲರ್ಗೆ 70 ಮಿಲಿಯನ್ ವೀಕ್ಷಣೆ ಸಿಕ್ಕಿದೆ.
ಇದೀಗ ಇದೇ ಟ್ರೇಲರ್ಗೆ ತೃತೀಯ ಲಿಂಗಿ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದೆ. ತೃತೀಯ ಲಿಂಗಿ ಹಕ್ಕುಗಳ ಆ್ಯಕ್ಟಿವಿಸ್ಟ್ ಲಕ್ಷ್ಮೀ ನಾರಾಯಣ ತ್ರಿಪಾಠಿ, ಅಕ್ಷಯ್ ಕುಮಾರ್ ಸಿನಿಮಾದ ಟ್ರೇಲರ್ ನೋಡಿ ಹುಬ್ಬೇರಿಸಿದ್ದಾರೆ. ‘ದೀಪಾವಳಿ ಧಮಾಕಾ ಇದು. ಅಕ್ಷಯ್ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ಅವರ ಲಕ್ಷ್ಮೀ ಬಾಂಬ್ ನಿಜಕ್ಕೂ ಮಜಬೂತಾಗಿದೆ. ಅದರಲ್ಲೂ ಆ ಶೀರ್ಷಿಕೆಯ ಹೆಸರಿನಲ್ಲಿಯೇ ಏನೋ ಇದೆ’ ಎಂದಿದ್ದಾರೆ.
ಈ ಟ್ವಿಟ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, ‘ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿ ಮತ್ತು ಹಾರೈಕೆಗೆ ಥ್ಯಾಂಕ್ಯು. ಈ ಲಕ್ಷ್ಮೀ ಕಡೆಯಿಂದ ಆ ಲಕ್ಷ್ಮೀಗೆ ನನ್ನ ನಮಸ್ಕಾರಗಳು. ಶೀರ್ಷಿಕೆ ನಿಜಕ್ಕೂ ಸಖತ್ ಆಗಿದೆ’ ಎಂದಿದ್ದಾರೆ ಅಕ್ಷಯ್.
ಇತ್ತ ನಟ ಪುಲ್ಕಿತ್ ಸಾಮ್ರಾಟ್ ಸಹ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರ ಬಂಪರ್ ಹಿಟ್ ಆಗಲಿಲ್ಲ ಎಂದರೆ, ಬಳೆ ತೊಡುವುದಾಗಿ ಹೇಳಿದ್ದಾರೆ. ಈ ಟ್ರೇಲರ್ನಲ್ಲಿ ಒಂದು ಸಂಭಾಷಣೆಯಿದೆ. ಒಂದು ಪಕ್ಷ ಯಾವತ್ತಾದರೂ ದೆವ್ವಗಳು ತನ್ನ ಎದುರು ಬಂದರೆ, ಬಳೆ ತೊಡುವುದಾಗಿ ಅಕ್ಷಯ್ ಅವರ ಪಾತ್ರ ಹೇಳುತ್ತದೆ. ಈ ಸಂಭಾಷಣೆಯಿಂದ ಸ್ಫೂರ್ತಿ ಪಡೆದಿರುವ ಪುಲ್ಕಿತ್, ಚಿತ್ರ ಬಂಪರ್ ಹಿಟ್ ಆಗಲಿಲ್ಲ ಎಂದರೆ, ಬಳೆ ತೊಡುತ್ತೇನೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್, ‘ನಿಮ್ಮ ಮಾತು ನಿಜವಾದರೆ ಸಿಹಿ ಹಂಚುತ್ತೇನೆ’ ಎಂದಿದ್ದರು. ನ. 9ರಂದು ಈ ಚಿತ್ರ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. (ಏಜೆನ್ಸೀಸ್)