

ಮುಂಬೈ: ಪ್ರಸಿದ್ಧ ಧೂಮ್ ಸಿನಿಮಾದ ಮೂರು ಭಾಗಗಳು ಹಿಟ್ ಲಿಸ್ಟ್ ಸೇರಿದ್ದು ಇನ್ನೇನು ಕೆಲ ದಿನಗಳಲ್ಲೇ ಧೂಮ್ 4 ಕೂಡ ಸೆಟ್ಟೇರುವ ಸಾಧ್ಯತೆಯಿದೆ. ಧೂಮ್ 4 ಚಿತ್ರದಲ್ಲಿ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ನಟ ಅಕ್ಷಯ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.
ಈ ಹಿಂದೆ ಧೂಮ್ ಸೀರೀಸ್ನಲ್ಲಿ ಜಾನ್ ಅಬ್ರಾಹಿಮ್, ಅಮಿರ್ ಖಾನ್ ಮತ್ತು ಹೃತಿಕ್ ರೋಷನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧೂಮ್ 4 ಚಿತ್ರ ಬರಲಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದಾಗಲೇ ವಿಲನ್ ಪಾತ್ರದ ಬಗ್ಗೆ ಬಹಳಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಶಾರುಖ್ ಖಾನ್, ರಣವೀರ್ ಸಿಂಗ್, ರಣಬೀರ್ ಕಪೂರ್, ಅಕ್ಷಯ್ ಕುಮಾರ್ ಹೀಗೆ ಹಲವು ಸ್ಟಾರ್ ನಟರುಗಳು ಹೆಸರು ವಿಲನ್ ಪಾತ್ರಕ್ಕೆ ಕೇಳಿಬಂದಿತ್ತು. 2019ರ ಅಕ್ಟೋಬರ್ನಲ್ಲಿ ಧೂಮ್ 4ನಲ್ಲಿ ಅಕ್ಷಯ್ ಕುಮಾರ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಚಿತ್ರದ ವಿತರಕ ತಂಡವಾದ ಯಶ್ ರಾಜ್ ಫಿಲಂ ಅದನ್ನು ಸುಳ್ಳು ಸುದ್ದಿ ಎಂದು ಹೇಳಿಕೆ ನೀಡಿತ್ತು. ಧೂಮ್ಗೆ ಕಿಲಾಡಿ ಚಿತ್ರದಂತೆ ಕಾಮಿಡಿ ಟಚ್ ನೀಡಬೇಕೇ? ನಾವು ಇನ್ನೂ ಧೂಮ್ 4 ಸ್ಕ್ರಿಪ್ಟ್ ಬಗ್ಗೆಯಾಗಲೀ ಅಥವಾ ಸಿನಿಮಾದ ತಾರಾಗಣದ ಬಗ್ಗೆಯಾಗಲೀ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಯಶ್ ಫಿಲಂಸ್ ಹೇಳಿತ್ತು. ಅದಾದ 4 ತಿಂಗಳ ಬಳಿಕ ಇದೀಗ ಬಾಲಿವುಡ್ನ ವಿಶ್ಲೇಷಕ ಅತುಲ್ ಮೋಹನ್ ಧೂಮ್ 4ನಲ್ಲಿ ಅಕ್ಷಯ್ ವಿಲನ್ ಎನ್ನುವ ಮಾಹಿತಿಯನ್ನು ಹೊರ ಬಿಟ್ಟಿದ್ದಾರೆ.
ನಿನ್ನೆ ರಾತ್ರಿ ಅತುಲ್ ಧೂಮ್ 4 ಚಿತ್ರದ ಕುರಿತಾಗಿ ಟ್ವೀಟ್ ಮಾಡಿದ್ದು, ಅಕ್ಷಯ್ ಈ ಸಿನಿಮಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಾರ ಅಧಿಕೃತವಾಗಿ ಹೊರಬೀಳಬೇಕಾಗಿದೆಯಷ್ಟೇ ಎಂದು ಹೇಳಿರುವ ಅವರು ಇದು ತಮಗೆ ಅತ್ಯಂತ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿರುವ ವಿಚಾರ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)