

ಬೆಂಗಳೂರು: ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಕಡಿಮೆಯಾಗುತ್ತಿರುವ ದಿನಗಳಲ್ಲಿ ಕಾ.ತಾ. ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಎಂಬ ಕಥೆಯನ್ನು, ದೃಶ್ಯರೂಪಕ್ಕೆ ತರಲಾಗಿದೆ. ಈ ಚಿತ್ರವು ಸದ್ದಿಲ್ಲದೆ ತಯಾರಾಗಿದ್ದು, ಕೆಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸಗಳಲ್ಲಿ ಈಗಾಗಲೇ ಪ್ರದರ್ಶನವಾಗಿ ಮೆಚ್ಚುಗೆ ಪಡೆದಿದೆ.
ಕಥೆಗಾರ ಕಾ.ತಾ ಚಿಕ್ಕಣ್ಣ ಚಿತ್ರ ನೋಡಿ ಖುಷಿಯಾಗಿದ್ದಾರೆ. ‘ಕಥೆಯಲ್ಲಿ ಹಳ್ಳಿಯ ಹೆಣ್ಣು ಮಗಳೊಬ್ಬಳು ಬಡತನದಿಂದ ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರು ಮಾಡಿದರೂ, ಎಸರಿಗಾಗಿ ಕಾಯ್ದು, ತೆಗೆದುಕೊಂಡು ಬರುತಿರುತ್ತಾಳೆ. ತನ್ನ ದಾರಿಯಲ್ಲಿಯೇ ಮಗಳು ಕೂಡ ಸಾಗುತ್ತಿರುವುದನ್ನು ಕಂಡು ಹೇಗೆ ಬದಲಾಗುತ್ತಾಳೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಮೂಲ ಕಥೆಗೆ ಧಕ್ಕೆ ಆಗದಂತೆ ಚಂಪಾ ಸುಂದರವಾಗಿ ಸಿನಿಮಾ ಮಾಡಿದ್ದು, ಇಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಅದರಲ್ಲೂ ಈ ಕತೆ ನಾಟಕವಾಗಿ ಪ್ರದರ್ಶನ ಕಂಡಾಗ ಹುಚ್ಚೇರಿ ಪಾತ್ರಕ್ಕೆ ಪ್ರಶಸ್ತಿ ಬಂದಿತ್ತು. ಈಗ ಚಿತ್ರದಲ್ಲೂ ಆ ಪಾತ್ರಕ್ಕೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಕೊಟ್ಟಿದೆ’ ಎಂದರು.
ಈ ಚಿತ್ರದಲ್ಲಿ ಅಕ್ಷತಾ ಪಾಂಡವಪುರ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಂಕಟಪ್ಪ ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ.