‘ರಾಧೇಯ’ ಅಜೇಯ್ ರಾವ್ : ‘ಯುದ್ಧಕಾಂಡ ಚಾಪ್ಟರ್ 2’ ಬಳಿಕ ನಟನ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧ

radheya
Published on

ಬೆಂಗಳೂರು: ನಟ ಅಜೇಯ್ ರಾವ್ ಅಭಿನಯಿಸಿದ್ದ ‘ಯುದ್ಧಕಾಂಡ ಚಾಪ್ಟರ್ 2’ ಕಳೆದ ಏಪ್ರಿಲ್‌ನಲ್ಲಿ ತೆರೆಕಂಡು, ಯಶಸ್ಸು ಆಗಿತ್ತು. ಇದರ ಬೆನ್ನಲ್ಲೇ ನಟನ ಮತ್ತೊಂದು ಸಿನಿಮಾ ‘ರಾಧೇಯ’ ರಿಲೀಸ್‌ಗೆ ಸಿದ್ಧವಾಗಿದೆ. ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ವೇದಗುರು ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಲ್ಲಿ ಅಜೇಯ್‌ಗೆ ಸೋನಲ್ ಮೊಂಟೇರೊ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡವು ಇದೀಗ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಇದೇ ನವೆಂಬರ್ 21ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಅಜೇಯ್ ರಾವ್, ‘ನನ್ನ ಸಿನಿ ಜರ್ನಿಯಲ್ಲಿಯೇ ಈ ಚಿತ್ರಕ್ಕೆ ವಿಶೇಷ ಸ್ಥಾನವಿದೆ. ಈ ಮೊದಲು ಕಾಣಿಸಿಕೊಂಡ ಅಜೇಯ್ ರಾವ್ ಬೇರೆ, ಇದರಲ್ಲಿ ತೋರಿಸಿರುವ ರೀತಿಯೇ ಬೇರೆ. ಹಾಗಾಗಿ, ವೇದಗುರು ಈ ಚಿತ್ರಕ್ಕೆ ಹೀರೋ ಅನಿಸುತ್ತಾರೆ. ಅಷ್ಟು ಸ್ಟ್ರಗಲ್ ಮಾಡಿ ಚಿತ್ರವನ್ನು ಈ ಹಂತಕ್ಕೆ ತಂದಿದ್ದಾರೆ. ಕ್ರಿಮಿನಲ್ ಆಗಿ ಜೈಲಿನಲ್ಲಿರುವವನ ಪಾತ್ರದ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ನನ್ನ ಪಾತ್ರ ಸೈಕ್ ಥರನೇ ಇದ್ದು, ಅಜೇಯ್ ಹೀಗೂ ಮಾಡುತ್ತಾನಾ ಎಂಬಂಥ ಪಾತ್ರವಿದು’ಎಂದರು. ನಟಿ ಸೋನಲ್, ‘ನನಗೆ ಹೊಸ ಅನುಭವ ಕೊಟ್ಟ ಚಿತ್ರವಿದು. ಅಮೃತ ಎಂಬ ಲೋಕಲ್ ಚಾನೆಲ್ನ ಕ್ರೈಮ್ ರಿಪೋರ್ಟರ್ ಆಗಿ ನಟಿಸಿದ್ದೇನೆ’ ಎಂದು ಪಾತ್ರದ ಬಗ್ಗೆ ಹಂಚಿಕೊಂಡರು. ವಿಯಾನ್ (ಸ್ಯಾಂಡಿ) ಸಂಗೀತ, ರಮ್ಮಿ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದೆ.

ಮಹಾಭಾರತದ ಕರ್ಣನ ಇನ್ನೊಂದು ಹೆಸರು ‘ರಾಧೇಯ’. ಕರ್ಣನ ಸಾಕು ತಾಯಿ ಹೆಸರು ರಾಧಾ. ಆ ಕರ್ಣನಿಗೂ ಈ ಕಥೆಗೂ ಸಂಬಂಧವಿಲ್ಲ. ಆದರೆ ಆತನ ತ್ಯಾಗದ ಅಂಶಗಳು ನಮ್ಮ ಕಥೆಯಲ್ಲಿವೆ. ಇದು ಲವ್ ಜಾನರ್ ಚಿತ್ರವಾದರೂ ಬೇರೆಯದೇ ರೀತಿ ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ.‘ರಾಧೇಯ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ. ಅದಕ್ಕಾಗಿ ಏನೆಲ್ಲ ಪ್ರಾಬ್ಲಮ್ ದಾಟಿ ಬರುತ್ತಾನೆ ಎಂಬುದನ್ನು ಶುದ್ಧ ಪ್ರೇಮಕಥೆಯನ್ನು ಇಲ್ಲಿ ತಿಳಿಸಿದ್ದೇವೆ. ವೇದಗುರು, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net