ಅಜೇಯರಾವ್ ಸಾಹಸ : ‘ಯುದ್ಧಕಾಂಡ-2’ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಘೋಷಿಸಿದ ನಟ

ajey rao
Published on

ಬೆಂಗಳೂರು: ‘ಯುದ್ಧಕಾಂಡ-2’ ಚಿತ್ರದ ಮೂಲಕ ಒಂದು ಹಂತದ ಯುದ್ಧ ಗೆದ್ದಿರುವ ನಟ ಅಜೇಯ್ ರಾವ್ ಇದೀಗ ಮತ್ತೊಂದು ಸಾಹಸಕ್ಕೆ ಇಳಿದಿದ್ದು, ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಸದ್ಯಕ್ಕೆ ಟೈಟಲ್ ರಿವೀಲ್ ಮಾಡಿಲ್ಲವಾದರೂ, ‘ಪ್ರೊಡಕ್ಷನ್ ನಂ.1’ ಹೆಸರಿನಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ. ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ನಿರ್ದೇಶಕ ಯೋಗರಾಜ್ ಭಟ್ ಪ್ರಥಮ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ದಿನಕರ್ ತೂಗುದೀಪ್ ಕ್ಯಾಮರಾಕ್ಕೆ ಚಾಲನೆ ನೀಡಿದರು. ಇದೊಂದು ನೈಜ ಘಟನೆಯ ಪ್ರೇರಣೆಯ ಕಥೆಯಾಗಿದ್ದು, ‘ನನ್ ಮಗಳು ಹೀರೋಯಿನ್’ ಖ್ಯಾತಿಯ ಎಸ್.ಕೆ.ಬಾಹುಬಲಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಅಜೇಯ್ ರಾವ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ಬೋಳು ತಲೆಯಲ್ಲಿ, ಅರ್ಧ ಕೂಲಿಂಗ್ ಗ್ಲಾಸ್ ಹಾಕಿಕೊಂಡು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದಿನ ಸಿನಿಮಾಗಳಿಗಿಂತ ಅಜೇಯ್ ರಾವ್ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ನಾಲ್ಕು ವಿಭಿನ್ನ ಗೆಟಪ್‌ನಲ್ಲಿದ್ದು, ದೇಹದಲ್ಲಿ ಕೂಡ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆಯಂತೆ. ಈ ಹೊಸ ಸಿನಿಮಾದ ಮೂಲಕ ಅಜೇಯ್ ರಾವ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ‘‘ಯುದ್ಧಕಾಂಡ’ ಶೂಟಿಂಗ್ ನಡೆಯುವಾಗಲೇ ಬಾಹುಬಲಿ ಈ ಕಥೆ ಹೇಳಿದ್ದರು. ಕಥೆ ಕೇಳಿದಾಗಲೇ ನನಗೆ ತುಂಬಾ ಇಷ್ಟವಾಗಿತ್ತು. ಪಾತ್ರಕ್ಕೆ ಹಲವಾರು ಆಯಾಮಗಳಿದ್ದು, ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿದೆ. ನಾನು ಈವರೆಗೆ ಮಾಡಿರುವ ಸಿನಿಮಾಗಳ ಪೈಕಿ ಇದು ದೊಡ್ಡದಾಗಲಿದೆ. ಪಾತ್ರವು ಸವಾಲಿನದ್ದಾಗಿದ್ದು, ಮೇಕಪ್‌ಗಾಗಿಯೇ ಐದು ತಾಸು ಕೂರಬೇಕಿದೆ. ನಾಲ್ಕು ಶೇಡ್‌ಗಳಿದ್ದು, ಫಿಟ್‌ನೆಸ್, ಸಾಮಾನ್ಯ ಮನುಷ್ಯ ಹಾಗೂ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದ ಎಲ್ಲ ಬಳಗಕ್ಕೂ ಸ್ಕೋಪ್ ಇರುವ ಕಥೆ ಇದು’ ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಇಲ್ಲಿ ಅಜೇಯ್ ರಾವ್‌ಗೆ ಮಲೈಕಾ ಟಿ.ವಸುಪಾಲ್ ಜೋಡಿಯಾಗಿದ್ದಾರೆ. ‘ಉಗ್ರಂ’ ಮಂಜು ಕಲಾ ಬಳಗದಲ್ಲಿದ್ದಾರೆ. ಯೋಗಾನಂದ ಮಲ್ನಾಡ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ನೈಜ ಘಟನೆಯ ಪ್ರೇರಣೆಯ ಕಥೆ: ಇದು ನೈಜ ಘಟನೆಯೊಂದರ ಪ್ರೇರೇಪಣೆಗೊಂಡ ಕಥೆಯಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಸ್.ಕೆ. ಬಾಹುಬಲಿ, ‘ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಕಥೆ ಇದು. ಮೊದಲು ಬರವಣಿಗೆ ಮಾಡಿದಾಗಲೇ ನನಗೆ ಅಜೇಯ್ ರಾವ್ ನಾಯಕ ಎಂಬುದು ತಲೆಯಲ್ಲಿತ್ತು. ಹಾಗಾಗಿ, ಅವರನ್ನು ಸಂಪರ್ಕ ಮಾಡಿದೆ. ಇದು ಅವರಿಗೆ ಸವಾಲಿನ ಪಾತ್ರ. ಫಸ್ಟ್‌ಲುಕ್‌ನಲ್ಲಿ ಬೋಳು ತಲೆಯ ಗೆಟಪ್‌ಗಾಗಿ ನಾವು ಮುಂಬೈನಿಂದ ವಿಗ್ ತರೆಸಿದ್ದೇವೆ. ಈ ವಿಗ್ ತಯಾರಿಕೆ ತಂಡವು ಈಗಾಗಲೇ ಹಿಂದಿಯ ‘ಜವಾನ್’, ‘ಅನಿಮಲ್’ ಹಾಗೂ ತೆಲುಗಿನ ‘ಪುಷ್ಪ’ ಚಿತ್ರಕ್ಕೂ ಕೆಲಸ ಮಾಡಿದೆ. ಈ ವಿಗ್‌ಗಾಗಿ ಅಜೇಯ್ ಐದು ತಾಸು ಮೇಕಪ್‌ಗೆ ಕೂರಬೇಕಿದೆ. ಒಂದು ಬಾರಿ ವಿಗ್ ಹಾಕಿಕೊಂಡರೆ, ಎರಡು ದಿನ ಮಾತ್ರ ಬರುವುದು. ಇದೇ ಗೆಟಪ್‌ಗೆ 15 ದಿನಗಳ ಕಾಲ ಶೂಟಿಂಗ್ ಇದ್ದು, 8 ವಿಗ್ ತಂದಿದ್ದೇವೆ. ಒಂದು ವಿಗ್‌ಗೆ 1 ಲಕ್ಷ ರೂ. ಖರ್ಚಾಗುತ್ತದೆ. ಸದ್ಯಕ್ಕೆ ನಾಲ್ಕು ಟೈಟಲ್ ರೆಡಿ ಮಾಡಿಕೊಂಡಿದ್ದೇವೆ. ಅದರಲ್ಲಿ ಒಂದನ್ನು ಸೆಲೆಕ್ಟ್ ಮಾಡಿ, ಪ್ರತ್ಯೇಕ ಕಾರ್ಯಕ್ರಮ ಮಾಡಿ ರಿವೀಲ್ ಮಾಡುತ್ತೇವೆ. ಮೈಸೂರು, ಬೆಂಗಳೂರು ಹಾಗೂ ಪಾಂಡಿಚೇರಿಯಲ್ಲಿ 60-70 ದಿನಗಳ ಕಾಲ ಶೂಟಿಂಗ್‌ಗೆ ಯೋಜಿಸಲಾಗಿದೆ. ಅಜೇಯ್ ರಾವ್ ಬಾಡಿ ಟ್ರಾನ್ಸ್​ಫಾರ್ಮಿಂಗ್​ ಮಾಡಬೇಕಾದ ಕಾರಣ, ನಡು ನಡುವೆ ಶೂಟಿಂಗ್‌ಗೆ ಬ್ರೇಕ್ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net