

ಬೆಂಗಳೂರು: ‘ನನಗೆ ಎರಡು ಹಠ ಹಾಗೂ ಆಸೆಗಳಿವೆ. ಒಂದು ನಾನು ಫ್ರಂಟ್ಲೈನ್ ನಾಯಕ ನಟರ ಸಾಲಿನಲ್ಲಿ ನಿಲ್ಲಬೇಕು. ಇನ್ನೊಂದು ಮಧ್ಯಮ ಬಜೆಟ್ ಚಿತ್ರವೊಂದು ದೇಶಾದ್ಯಂತ ಸಂಚಲನ ಮೂಡಿಸಿ, ಪ್ಯಾನ್ ಇಂಡಿಯಾ ಚಿತ್ರವಾಗಬೇಕು. ಈ ಎರಡು ಆಸೆಗಳು ‘ಯುದ್ಧಕಾಂಡ’ ಮೂಲಕ ನೆರವೇರುತ್ತವೆ’. - ಇದು ‘ಯುದ್ಧಕಾಂಡ ಚಾಪ್ಟರ್-2’ ಬಗ್ಗೆ ನಟ, ನಿರ್ಮಾಪಕ ಅಜೇಯ್ ರಾವ್ ಹೇಳಿದ ಮಾತು.
ನಟ ಅಜೇಯ್ ರಾವ್ ಕಳೆದ ಮೂರು ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಂಡಿಲ್ಲ. 2022ರಲ್ಲಿ ತೆರೆಕಂಡಿದ್ದ ‘ಶೋಕಿವಾಲ’ ಅವರು ಅಭಿನಯಿಸಿದ್ದ ಕೊನೆಯ ಸಿನಿಮಾ. ಇದೀಗ ಆಜೇಯ್, ಪವನ್ ಭಟ್ ನಿರ್ದೇಶನದ ‘ಯುದ್ಧಕಾಂಡ’ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟನೆ ಜತೆಗೆ ಈ ಚಿತ್ರವನ್ನು ಅವರೇ ನಿರ್ಮಿಸುತ್ತಿರುವುದು ಮತ್ತೊಂದು ವಿಶೇಷತೆ. ಇದೇ ತಿಂಗಳ 18ರಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಬಗ್ಗೆ ಅವರು, ‘ಹಲವು ಸವಾಲುಗಳನ್ನು ದಾಟಿ ಈ ಚಿತ್ರ ಪೂರ್ಣಗೊಂಡಿದೆ. ಇದೊಂದು ಹೆಣ್ಣಿನ ಕಥೆ. ಸಂತ್ರಸ್ತೆಯಾದ ಹೆಣ್ಣಿಗೆ ಸರಿಯಾದ ಸಮಯದಲ್ಲಿ ನ್ಯಾಯ ಸಿಗಬೇಕು ಎಂಬುದನ್ನು ಹೇಳುತ್ತಿದ್ದೇವೆ. ಇಲ್ಲಿ ಹೋರಾಟ ಇದೆ. ಹಾಗೆಯೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದಷ್ಟು ವಿಚಾರಗಳು ಸರಿಯಾಗಬೇಕಿದೆ ಎಂಬುದನ್ನು ಒತ್ತಿ ಹೇಳಿದ್ದೇವೆ. ಅದಕ್ಕಾಗಿ ಈ ಸಿನಿಮಾ ರಾಷ್ಟ್ರಪತಿಗಳಿಗೆ ತಲುಪಬೇಕು ಎಂಬುದು ನಮ್ಮ ಆಶಯ’ ಎಂದು ಮಾಹಿತಿ ನೀಡಿದರು. ಇಲ್ಲಿ ಅಜೇಯ್ ರಾವ್‌ಗೆ ‘ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ ಜೋಡಿಯಾಗಿದ್ದಾರೆ. ‘ಯಾವುದೇ ಘಟನೆ ನಡೆದರೂ ಸರಿಯಾದ ಸಮಯಕ್ಕೆ ನ್ಯಾಯ ಸಿಗಬೇಕು. ಇದು ನನ್ನ ಡ್ರೀಮ್ ರೋಲ್. ನಿವೇದಿತಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಪಾತ್ರ ಪರಿಚಯಿಸಿಕೊಂಡರು ಅರ್ಚನಾ.
ನನಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ: ಅಜೇಯ್ ರಾವ್ ಎರಡು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿದ್ದು, 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂಬ ಬೇಸರ ಅವರದು. ‘ಒಬ್ಬ ಕಲಾವಿದನಾಗಿ ನನಗೆ ಬಿಗ್ ಬ್ರೇಕ್ ಬೇಕಿದೆ. ಈವರೆಗೂ ನನೆಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂಬ ಕೊರಗು ಇದೆ. ಹಾಗಂತ ಇಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ನನ್ನನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂಬ ಬೇಸರವಿದೆ. ಅದಕ್ಕಾಗಿ ನಮ್ಮ ಭವಿಷ್ಯವನ್ನು ನಾವೇ ಕಟ್ಟಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ’ ಎಂದರು.
ಸಾಲ ಮಾಡಿರುವುದು ನಿಜ: ಈ ಚಿತ್ರಕ್ಕಾಗಿ ಅಜೇಯ್ ರಾವ್ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ವಿಚಾರಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಹೌದು, ನಾನು ಸಾಲ ಮಾಡಿರುವುದು ನಿಜ. ಆದರೆ, ನಷ್ಟವಾಗಿದ್ದೇನೆ ಎಂಬುದು ಸುಳ್ಳು. ಸಿನಿಮಾ ನನ್ನ ಪ್ಯಾಶನ್. ಹಾಗಾಗಿ ಇದಕ್ಕೆ ಹಣ ಹೂಡಿರುವುದು ಆತ್ಮತೃಪ್ತಿ ನೀಡಿದೆ. ಪ್ರೇಕ್ಷಕ ದುಡ್ಡು ಕೊಟ್ಟು ಸಿನಿಮಾ ನೋಡುತ್ತಾನೆ. ಅದು ಚೆನ್ನಾಗಿದ್ದರಷ್ಟೆ ಆತನಿಗೆ ಲಾಭ. ಇಲ್ಲವಾದರೆ ನಷ್ಟವಾದಂತೆ. ನನ್ನ ಇಷ್ಟದ ಕೆಲಸಕ್ಕೆ ಹಣ ಹಾಕಿದ್ದೇನೆ. ಒಳ್ಳೆಯ ವಿಚಾರಕ್ಕೆ ಸಾಲ ಮಾಡಿದ್ದೇನೆ’ ಎಂದು ಉತ್ತರಿಸಿದ್ದಾರೆ.