

ಮುಂಬೈ: ಬಾಲಿವುಡ್ನ ಹಲವು ನಟ-ನಟಿಯರು ಓಟಿಟಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ. ಯಾವಾಗ ಮನೋಜ್ ಬಾಜ್ಪೇಯಿ, ಸೈಫ್ ಅಲಿ ಖಾನ್, ಬಾಬ್ಬಿ ಡಿಯೋಲ್ ಮುಂತಾದವರು ಓಟಿಟಿಯಲ್ಲಿ ಸ್ಟಾರ್ಪಟ್ಟ ಅಲಂಕರಿಸಿದರೋ, ಅಲ್ಲಿಂದ ಬೇರೆಯವರ ಮಧ್ಯೆಯೂ ಓಟಿಟಿಗೆ ಎಂಟ್ರಿ ಕೊಡುವುದಕ್ಕೆ ಪೈಪೋಟಿ ನಡೆಯುತ್ತಿದೆ.
ಇದೀಗ, ಅಜಯ್ ದೇವಗನ್ ಸಹ ಓಟಿಟಿಯ ವೆಬ್ಸೀರೀಸ್ವೊಂದರಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದು, ಅದಕ್ಕಾಗಿ ಅವರು ಎಷ್ಟು ಸಂಬಾವನೆ ಪಡೆಯುತ್ತಿದ್ದಾರೆ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಅಂದಹಾಗೆ, ಡಿಸ್ನಿ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿರುವ 'ರುದ್ರ' ಎಂಬ ವೆಬ್ಸೀರೀಸ್ನಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದು, ಅದಕ್ಕಾಗಿ 125 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ರಿಟಿಶ್ ವೆಬ್ಸೀರೀಸ್ 'ಲೂಥರ್'ನ ರೀಮೇಕ್ ಆಗಿರುವ ಈ ಕಾರ್ಯಕ್ರಮದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಅಜಯ್ ಕಾಣಿಸಿಕೊಳ್ಳುತ್ತಿದ್ದಾರಂತೆ.
'ತಾನ್ಹಾಜಿ' ಯಶಸ್ಸಿನ ನಂತರ ಸಹಜವಾಗಿಯೇ ಅಜಯ್ ದೇವಗನ್ಗೆ ಬೇಡಿಕೆ ಇದ್ದು, ಈಗಾಗಲೇ ಅವರ 'ಭುಜ್' ಚಿತ್ರವು ಅದೇ ಡಿಸ್ನಿ-ಹಾಟ್ಸ್ಟಾರ್ಗೆ ಮಾರಾಟವಾಗಿದೆ. ಈಗ 'ರುದ್ರ' ಮೂಲಕ ಅಜಯ್ ಮತ್ತು ಓಟಿಟಿಯ ಬಾಂಧವ್ಯ ಇನ್ನಷ್ಟು ಹೆಚ್ಚಿದೆ. ಈ 125 ಕೋಟಿ ರೂ.ಗಳ ಡೀಲ್ ಬರೀ ವೆಬ್ಸರಣಿಯಲ್ಲಿ ನಟಿಸುವುದಕ್ಕಷ್ಟೇ ಅಲ್ಲ, ಪ್ರೋಮೋ ಶೂಟ್, ಸೋಷಿಯಲ್ ಮೀಡಿಯಾ ಪೋಸ್ಟ್, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಿಕೆ ... ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.