

ಹೈದರಾಬಾದ್: ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಅವರ ಬಹುತಾರಾಗಣದ ಬಹುನಿರೀಕ್ಷಿತ ಆರ್ಆರ್ಆರ್ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ನಟಿಸಲು ಅಜಯ್ ಅವರು ಸಂಭಾವನೆಯನ್ನೇ ಪಡೆದಿಲ್ಲವಂತೆ.
ನಿರ್ಮಾಪಕ ಡಿವಿವಿ ದಾನಯ್ಯಾ ಅವರು ಪೂರ್ತಿ ಸಂಭಾವನೆಯನ್ನು ನೀಡಲು ಮುಂದಾಗಿದ್ದರಂತೆ, ಆದರೆ ಅದನ್ನು ತೆಗೆದುಕೊಳ್ಳಲು ಅಜಯ್ ತಿರಸ್ಕರಿಸಿದ್ದಾರೆ. ಅದಕ್ಕೆ ಕಾರಣ ರಾಜಮೌಳಿ ಮತ್ತು ಅಜಯ್ ನಡುವಿನ ಸ್ನೇಹ ಎಂದು ಮೂಲಗಳು ತಿಳಿಸಿವೆ.
2012ರಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡು ಸಿನಿ ರಸಿಕರ ಮನಗೆದ್ದ "ಈಗ" ಚಿತ್ರದಿಂದ ರಾಜಮೌಳಿ ಮತ್ತು ಅಜಯ್ ನಡುವೆ ಸ್ನೇಹ ಚಿಗುರೊಡೆಯಿತಂತೆ. ಈಗ ಚಿತ್ರದ ಹಿಂದಿ ಅವತರಣಿಕೆಯ "ಮಕ್ಕಿ"ಗೆ ಅಜಯ್ ಧ್ವನಿ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸಂಬಂಧ ಇಂದು ಸಂಭಾವನೆ ತಿರಸ್ಕರಿಸುವ ಮಟ್ಟಕ್ಕೆ ಬೆಳೆದಿದೆ.
ಆರ್ಆರ್ಆರ್ ಚಿತ್ರದ ಸ್ಟಾರ್ ನಟರಾದ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ನೀಡಿರುವ ಸಂಭಾವನೆಯಷ್ಟೇ ಅಜಯ್ಗೆ ನೀಡಲು ನಿರ್ಮಾಪಕರು ಮುಂದಾಗಿದ್ದರು. ಯಾವಾಗ ಇದನ್ನು ಅಜಯ್ ನಿರಾಕರಿಸಿದರೂ, ಸಿನಿ ಮಾರುಕಟ್ಟೆಯಲ್ಲಿ ಇರುವ ಮೌಲ್ಯವನ್ನು ನೀಡಲು ಮುಂದಾಗಿದ್ದರು. ಅದನ್ನೂ ನಿರಾಕರಿಸಿರುವ ಅಜಯ್, ರಾಜಮೌಳಿ ಸ್ನೇಹಕ್ಕಾಗಿ ಮಾತ್ರ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆರ್ಆರ್ಆರ್ ಚಿತ್ರವು ಟಾಲಿವುಡ್ನ ಬಹುನಿರೀಕ್ಷಿತ ಸಿನಿಮ ಆಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಇಂದೊಂದು ಐತಿಹಾಸಿಕ ಸಿನಿಮಾ ಎನ್ನಲಾಗಿದೆ. (ಏಜೆನ್ಸೀಸ್)