

ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್ ( Aishwarya Rai ) ಹೋದ ಕಡೆಯಲ್ಲೆಲ್ಲ ಅವರ ಮಗಳು ಆರಾಧ್ಯ ( Aaradhya bachchan ) ಜತೆಯಲ್ಲಿ ಇದ್ದೇ ಇರುತ್ತಾರೆ. ಯಾವುದೇ ಕಾರ್ಯಕ್ರಮ ಆಗಿರಲಿ ಅಮ್ಮ-ಮಗಳು ಜತೆಯಲ್ಲೇ ಬರುತ್ತಾರೆ. ಹೀಗಾಗಿ ಅನೇಕರು ಆರಾಧ್ಯಗೇನೂ ಶಾಲೆ ಇರುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದೂ ಉಂಟು.
ಇತ್ತೀಚೆಗಷ್ಟೇ ಇದೇ ವಿಚಾರವಾಗಿ ನಟಿ ಹಾಗೂ ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ಮಕ್ಕಳನ್ನು ಹ್ಯಾಂಡ್ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗುವುದು ಎಂಥಾ ಸಂಸ್ಕೃತಿ? ಆಫೀಸಿಗೆ, ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರೆದುಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸಿದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೋಶೂಟ್ ಇಂತಹವೆಲ್ಲ ಇರುತ್ತವೆ. ತಾಯಿ ವಿಶ್ವ ಸುಂದರಿ, ಹೋದಲೆಲ್ಲಾ ಆ ಪುಟ್ಟ ಹುಡುಗಿ ಬಾಲಂಗೋಚಿಯಂತೆ, ಒಂದು ಬದಿಯಲ್ಲಿ ಆಕೆಯನ್ನು ತಯಾರು ಮಾಡಿದ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್ ಹಾಗೂ ಮೇಕಪ್ ಮಾಡಿದವರು, ಮತ್ತೊಂದು ಕಡೆ ಆ ಹುಡುಗಿ ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜಗತ್ತೆಲ್ಲ ಜತೆ ತಿರುಗಾಡುತ್ತಾಳಲ್ಲಾ? ತಾಯಿಗೆ ಹಾಗೆ ಉಡುಗೆ ತೊಟ್ಟು ಪೋಸ್ ಕೊಡುವುದು, ಅವಳ ವೃತ್ತಿ! ಈ ಮಗುವಿಗಲ್ಲೇನು ಕೆಲಸ? ಯಾಕೊ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡುಬಿಡುತ್ತೇವಾ? ಎಂದು ಮಾಳವಿಕಾ ಹೇಳಿದ್ದರು.
ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ IIFA ಉತ್ಸವದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಒಟ್ಟಿಗೆ ಭಾಗವಹಿಸಿದ್ದನ್ನು ಕಂಡು ಮಾಳವಿಕಾ ಈ ಮಾತುಗಳನ್ನು ಆಡಿದ್ದರು. ಇದೀಗ ಅದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಐಶ್ವರ್ಯಾ ಕೊಟ್ಟಿರುವ ಉತ್ತರ ಭಾರಿ ವೈರಲ್ ಆಗುತ್ತಿದೆ.
ಕಾರ್ಯಕ್ರಮದಲ್ಲಿ ಕ್ಯಾಮೆರಾಗಳಿಗೆ ಪೋಸ್ ನೀಡುವಾಗ ಪತ್ರಕರ್ತರೊಬ್ಬರು "ನಿಮ್ಮ ಮಗಳು ಯಾವಾಗಲೂ ನಿಮ್ಮ ಜತೆಯಲ್ಲಿಯೇ ಇರುತ್ತಾರೆ. ಆಕೆ ಏನಾದರೂ ಉತ್ತಮವಾದುದ್ದನ್ನು ಕಲಿಯುತ್ತಾರೆಯೇ" ಎಂದು ಪ್ರಶ್ನೆ ಮಾಡಿದರು. ಪತ್ರಕರ್ತ ತನ್ನ ಪ್ರಶ್ನೆಯನ್ನು ಪೂರ್ಣಗೊಳಿಸುವ ಮುನ್ನವೇ ಉತ್ತರ ನೀಡಿದ ಐಶ್ವರ್ಯಾ, ಅಯ್ಯೋ ಆಕೆ ನನ್ನ ಮಗಳು, ಅದಕ್ಕಾಗಿ ಆಕೆ ನನ್ನ ಜತೆಯಲ್ಲಿಯೇ ಇರುತ್ತಾಳೆ ಎಂದು ಹೇಳಿ ನಕ್ಕಿದರು.
ಅಂದಹಾಗೆ ಗ್ರೀನ್ ಕಾರ್ಪೆಟ್ ಮೇಲೆ ಆ ಹೇಳಿಕೆ ನೀಡುವ ಸಂದರ್ಭದಲ್ಲಿ ನಟಿ ಐಶ್ವರ್ಯಾ ರೈ ಸಾಕಷ್ಟು ಜಾಲಿಯಾಗಿ ಕಾಣುತ್ತಿದ್ದರು. ನಗುವಿನೊಂದಿಗೆ ವರದಿಗಾರನಿಗೆ ಉತ್ತರಿಸಿ ಅಲ್ಲಿಂದ ಹೊರನಡೆದರು. ಈ ವೇಳೆ ಮಗಳು ಆರಾಧ್ಯ, ಐಶ್ವರ್ಯರನ್ನು ಹಿಂಬಾಲಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮದೇಯಾದ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ.
ಐಶ್ವರ್ಯಾಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ತಾಯಂದಿರಿಗೆ ಕೆಲವು ಸಲಹೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಆರಾಧ್ಯ ಅವರಂತಹ ಮಗಳನ್ನು ಬೆಳೆಸಲು ತಾಯಿಯಾಗಿ ಏನು ಮಾಡಬೇಕು ಎಂದು ಪ್ರಶ್ನಿಸಿದಾಗ, ಐಶ್ವರ್ಯಾ ಅವರು ವಿಸ್ತಾರವಾದ ಪ್ರತಿಕ್ರಿಯೆಯನ್ನು ನೀಡಿದರು. ನೀವು ಓರ್ವ ತಾಯಿ ಮತ್ತು ಎಲ್ಲವು ನಿಮಗೆ ಚೆನ್ನಾಗಿ ತಿಳಿದಿದೆ. ಒಬ್ಬರಿಗೊಬ್ಬರು ಸಲಹೆ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಮ್ಮ ಹುಟ್ಟಿನೊಂದಿಗೆ ಯಾವುದೇ ನಿಯಮಗಳ ಪುಸ್ತಕವೂ ಬಂದಿಲ್ಲ. ನೀವೇ ಒಂದು ಸೋಜಿಗ. ನೀವೇ ಎಲ್ಲವನ್ನು ಮಾಡುತ್ತೀರಿ ಮತ್ತು ನಿಮ್ಮ ಮಗಳೊಂದಿಗೆ ಸೋಜಿಗದಂತೆಯೇ ಇರುತ್ತೀರಿ. ಎಲ್ಲವೂ ಆಶೀರ್ವಾದ ಮತ್ತು ಪ್ರೀತಿಯಷ್ಟೇ ಎಂದು ಐಶ್ವರ್ಯಾ ಹೇಳಿದರು.
ಅಂದಹಾಗೆ ಈ ಕಾರ್ಯಕ್ರಮದಲ್ಲಿ ತಮಿಳು ನಟ ವಿಕ್ರಮ್, ಚಿರಂಜೀವಿ, ಎಆರ್ ರೆಹಮಾನ್, ಮಣಿರತ್ನಂ ಹಾಗೂ ನಟಿ ಸಮಂತಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಿವುಡ್‌ನಿಂದಲೂ ಐಶ್ವರ್ಯಾ ರೈ, ಶಾಹಿದ್ ಕಪೂರ್, ಶಬಾನಾ ಅಜ್ಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. (ಏಜೆನ್ಸೀಸ್)