ಐಶ್ವರ್ಯಾ ರೈ ಬಾಡಿಗಾರ್ಡ್​ ಸಂಬಳ MNC ಉದ್ಯೋಗಿಗಿಂತಲೂ ಹೆಚ್ಚು! 1 ವರ್ಷದ ವೇತನ ಕೇಳಿದ್ರೆ ಬೆರಗಾಗ್ತೀರಿ | Aishwarya Rai

Aishwarya Rai
Published on

ನವದೆಹಲಿ: ಬಾಲಿವುಡ್‌ನ ಜನಪ್ರಿಯ ನಟಿ ಐಶ್ವರ್ಯಾ ರೈ ( Aishwarya Rai ) ಬಚ್ಚನ್ ವೈಯಕ್ತಿಕ ವಿಚಾರಕ್ಕಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಪತಿ ಅಭಿಷೇಕ್​ ಬಚ್ಚನ್​ ಜತೆ ಭಿನ್ನಾಭಿಪ್ರಾಯ ಹೊಂದಿದ್ದು, ಡಿವೋರ್ಸ್​ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ನಿತ್ಯವೂ ಹರಿದಾಡುತ್ತಲೇ ಇದೆ. ಆದರೆ, ಈವರೆಗೂ ಅಭಿಷೇಕ್​ ಆಗಲಿ, ಐಶ್ವರ್ಯಾ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಆದರೂ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇರುತ್ತದೆ.

ಇದರ ನಡುವೆ ಐಶ್ವರ್ಯಾ ರೈಗೆ ಸಂಬಂಧಿಸಿದ ಮತ್ತೊಂದು ಸುದ್ದಿ ವೈರಲ್​ ಆಗುತ್ತಿದೆ. ಆದರೆ, ಈ ಬಾರಿ ಎಲ್ಲರ ಗಮನಸೆಳೆದಿರುವುದು ಐಶ್ವರ್ಯಾ ರೈ ಅಲ್ಲ ಬದಲಿಗೆ ಅವರ ಬಾಡಿಗಾರ್ಡ್​. ಯಾರೇ ಆಗಲಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ ಅಥವಾ ಸೆಲೆಬ್ರಿಟಿ ಎನಿಸಿಕೊಂಡಾಗ ಅವರ ಭದ್ರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ತಮ್ಮ ರಕ್ಷಣೆಗಾಗಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮದೇ ಆದ ಅಂಗರಕ್ಷಕನನ್ನು ನೇಮಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಗಳು ಎಲ್ಲೇ ಹೋದರು ಅವರಿಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳುವುದು ಬಾಡಿಗಾರ್ಡ್​ಗಳ ಕೆಲಸವಾಗಿರುತ್ತದೆ. ಅದೇ ರೀತಿ ನಟಿ ಐಶ್ವರ್ಯಾ ರೈ ಕೂಡ ಬಾಡಿಗಾರ್ಡ್ ನೇಮಿಸಿಕೊಂಡಿದ್ದಾರೆ.

ಬಾಡಿಗಾರ್ಡ್​ ಅಂದಕೂಡಲೇ ಎಲ್ಲರ ತಲೆಗೆ ಮೊದಲು ಬರುವ ಪ್ರಶ್ನೆ ಯಾವುದೆಂದರೆ ಸಂಬಳ ಎಷ್ಟಿರಬಹುದು ಎಂಬುದು. ಅದಕ್ಕೆ ಉತ್ತರ ಮುಂದಿದೆ. ಅಂದಹಾಗೆ ಐಶ್ವರ್ಯಾ ರೈ ಬಾಡಿಗಾರ್ಡ್​ ಹೆಸರು ಶಿವರಾಜ್. ಇವರ ಮಾಸಿಕ ವೇತನ 7 ಲಕ್ಷ ರೂ.ವರೆಗೂ ಇದೆ ಎಂದು ಕೆಲ ಹಿಂದಿ ಸಿನಿಮಾ ವೆಬ್​ಸೈಟ್​ಗಳು ವರದಿ ಮಾಡಿವೆ. ಶಿವರಾಜ್​ ಅವರು ವಾರ್ಷಿಕವಾಗಿ 1 ಕೋಟಿ ರೂ.ವರೆಗೆ ಸಂಬಳ ಪಡೆಯುತ್ತಾರೆಂದು ಹೇಳಲಾಗಿದೆ.

ಐಶ್ವರ್ಯಾ ಅವರಿಗೆ ಮತ್ತೊಬ್ಬ ಬಾಡಿಗಾರ್ಡ್​ ಕೂಡ ಇದಾರೆ. ಅವರ ಸಂಬಳವು ಕೂಡ ವರ್ಷಕ್ಕೆ ಒಂದು ಕೋಟಿ ರೂ. ಇದೆ ಎಂದು ಹೇಳಲಾಗಿದೆ. 2015ರಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ತಮ್ಮ ಬಾಡಿಗಾರ್ಡ್​ ಶಿವರಾಜ್ ಅವರ ಮದುವೆಗೆ ಹಾಜರಾಗಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್​ ಆಗಿತ್ತು. ಅಲ್ಲದೆ, ಐಶ್ವರ್ಯಾ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವರದಿಗಳ ಪ್ರಕಾರ, ಶಿವರಾಜ್ ತಾಂತ್ರಿಕ ಪರಿಣಿತರೂ ಆಗಿದ್ದು, ಅವರು ನಟಿಯೊಂದಿಗೆ ಇರುವಾಗ, ಯಾರೂ ಅವರನ್ನು ಮುಟ್ಟಲು ಸಾಧ್ಯವಿಲ್ಲ. ಶಿವರಾಜ್ ಅವರು ಬಚ್ಚನ್ ಕುಟುಂಬದೊಂದಿಗೆ ಬಹಳ ದಿನಗಳಿಂದ ಇದ್ದಾರೆ ಮತ್ತು ಐಶ್ವರ್ಯಾಗೆ ರಕ್ಷಣೆ ನೀಡುವುದು ಅವರ ಮುಖ್ಯ ಕರ್ತವ್ಯವಾಗಿದೆ.

ಬಾಲಿವುಡ್‌ನ ಮಿನುಗು ತಾರೆ ಐಶ್ವರ್ಯಾ ಅವರು ಭಾರಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಬೃಹತ್ ಬಂಗಲೆಗಳು, ಆಸ್ತಿಗಳು, ವೈಯಕ್ತಿಕ ಆಸ್ತಿಗಳು, ಆಭರಣ ಸಂಗ್ರಹಣೆ, ಷೇರುಗಳಲ್ಲಿನ ಹೂಡಿಕೆಗಳು ಸೇರಿದಂತೆ ಭಾರಿ ಆಸ್ತಿ ಹೊಂದಿದ್ದಾರೆ. ಸಿಎನ್​ಬಿಸಿ ಟಿವಿ18 ವರದಿಯ ಪ್ರಕಾರ, ಐಶ್ವರ್ಯಾ ಅವರ ಪ್ರಸ್ತುತ ನಿವ್ವಳ ಮೌಲ್ಯ 776 ಕೋಟಿ ರೂಪಾಯಿ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net