‘ಶಾಕುಂತಲೆ ಐಶಾನಿ ಶೆಟ್ಟಿ ಹೊಸ ಜವಾಬ್ದಾರಿ: ಏನಂದ್ರು ಸ್ಯಾಂಡಲ್​ವುಡ್ ನಟಿ

asiham
Published on

ಬೆಂಗಳೂರು: ‘ನಡುವೆ ಅಂತರವಿರಲಿ’, ‘ಹೊಂದಿಸಿ ಬರೆಯಿರಿ’ ಖ್ಯಾತಿಯ ನಟಿ ಐಶಾನಿ ಶೆಟ್ಟಿ ನಟನೆ ಜತೆಗೆ ನಿರ್ದೇಶಕಿಯಾಗುತ್ತಿರುವ ಬಗ್ಗೆ ಈ ಹಿಂದೆಯೇ ಘೋಷಿಸಿದ್ದರು. ಇದೀಗ ತಮ್ಮ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಮತ್ತೊಂದು ಹೊಸ ಜವಾಬ್ದಾರಿ ವಹಿಸುತ್ತಿದ್ದು, ‘ಶಾಕುಂತಲೆ ಸಿನಿಮಾಸ್’ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ. ಐಶಾನಿ ಶೆಟ್ಟಿ ನಟಿಸಿದ್ದ ‘ನಡುವೆ ಅಂತರವಿರಲಿ’ ಚಿತ್ರದ ‘ಶಾಕುಂತಲೆ ಸಿಕ್ಕಳು’ ಸಾಂಗ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅವರನ್ನು ಅದೇ ಹೆಸರಿನಲ್ಲಿ ಫ್ಯಾನ್ಸ್ ಗುರುತಿಸುತ್ತಿದ್ದರು. ಹೀಗಾಗಿ ನಿರ್ಮಾಣ ಸಂಸ್ಥೆಗೆ ‘ಶಾಕುಂತಲೆ ಸಿನಿಮಾಸ್’ ಎಂದು ಹೆಸರಿಟ್ಟಿದ್ದಾರೆ. ‘ಇಷ್ಟಪಟ್ಟು ಮಾಡಿದ ಕಥೆಯು ನಮ್ಮ ಇಷ್ಟದಂತೆ ಬರಬೇಕು ಎನ್ನುವುದು ನಮಗೂ ಇರುತ್ತದೆ. ಆ ಕಾರಣಕ್ಕಾಗಿ ನಾನು ನಿರ್ದೇಶನದ ಜತೆಗೆ ನಿರ್ಮಾಣಕ್ಕೂ ಮುಂದಾದೆ. ಇಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯವಿದೆ. ನಾನು ಅಂದುಕೊಂಡ ಹಾಗೆಯೇ ಕಥೆ ತರಬಹುದು. ಜತೆಗೆ ನನ್ನ ಚಿತ್ರವನ್ನು ನಾನೇ ನಿರ್ಮಿಸುವುದು ಹೆಮ್ಮೆಯ ವಿಚಾರ. ಸ್ವಲ್ಪ ಸವಾಲು ಅನಿಸಬಹುದು. ಅದನ್ನು ಸ್ವೀಕರಿಸಲು ಸಿದ್ಧಳಿದ್ದೇನೆ’ ಎಂದು ಖುಷಿ ಹಂಚಿಕೊಂಡರು.

ಕರಾವಳಿ ಭಾಗದ ಥ್ರಿಲ್ಲರ್ ಕಥೆ: ನಟನೆ, ನಿರ್ದೇಶನ ಮತ್ತು ನಿರ್ಮಾಣದ ಮೂರೂ ಜವಾಬ್ದಾರಿಗಳನ್ನು ನಿಭಾಯಿಸಲು ಸಾಕಷ್ಟು ಸಿದ್ಧತೆ ನಡೆಸಿರುವ ಐಶಾನಿ, ‘ಕಾಲೇಜು ದಿನಗಳಲ್ಲಿ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ನನ್ನ ನಿರ್ದೇಶನದ ‘ಕಾಜಿ’ ಕಿರುಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆಗ ನನಗೆ ತುಂಬಾ ಜನ ಸಿನಿಮಾ ನಿರ್ದೇಶಿಸುವಂತೆ ಸಲಹೆ ನೀಡಿದರು. ಹಾಗಾಗಿ, ನಾನೊಂದು ಕಥೆ ಸಿದ್ಧಪಡಿಸಿಕೊಂಡಿದ್ದೆ. ಅದನ್ನೇ ತೆರೆಮೇಲೆ ತರಲು ಮುಂದಾಗುತ್ತಿದ್ದೇನೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ವಾರದೊಳಗೆ ಟೈಟಲ್ ಹಾಗೂ ಸಿನಿಮಾದ ಬಗ್ಗೆ ಮಾಹಿತಿ ನೀಡುವೆ. ಇದೊಂದು ಕರಾವಳಿ ಭಾಗದಲ್ಲಿ ನಡೆಯುವ ಸಸ್ಪೆನ್ಸ್-ಥ್ರಿಲ್ಲರ್ ಕಥೆ. ಪುತ್ತೂರಿನಲ್ಲಿ ಶೂಟಿಂಗ್ ನಡೆಸಲಿದ್ದೇನೆ. ಇಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ಹಾಗಂತ ಮಹಿಳಾ ಪ್ರಧಾನ ಸಿನಿಮಾ ಎಂದು ಬ್ರ್ಯಾಂಡ್ ಮಾಡುವುದಕ್ಕಿಂತ ಕಥೆಯೇ ಬ್ರ್ಯಾಂಡ್ ಆಗಬೇಕಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಮಾಡುವ ಯೋಚನೆ ಇದೆ’ ಎಂದು ಮಾಹಿತಿ ನೀಡುತ್ತಾರೆ. ಹಾಗೆಯೇ, ನಿರ್ದೇಶನ, ನಿರ್ಮಾಣವನ್ನು ಒಂದೇ ಚಿತ್ರಕ್ಕೆ ಸೀಮಿತವಾಗಿಸದೇ, ಮುಂದುವರಿಸುವ ಆಲೋಚನೆಯಿರುವ ಐಶಾನಿ ಸದ್ಯ ನಾಲ್ಕು ಕಥೆಗಳನ್ನು ಬರೆದಿಟ್ಟುಕೊಂಡಿದ್ದಾರೆ. ಜತೆಗೆ ಬೇರೆ ಸಿನಿಮಾಗಳಲ್ಲೂ ನಟಿಸಲಿದ್ದು, ಒಂದು ಕಥೆ ಓಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net