ಬೋಲ್ಡ್ ಲುಕ್​ನಲ್ಲಿ ಐಶಾನಿ; ಧರಣಿ ಮಂಡಲದಲ್ಲಿ ನಮ್ಮ ನಿಮ್ಮೆಲ್ಲರ ಕಥೆ

Aishani
Published on

ಬೆಂಗಳೂರು: ‘ಧರಣಿ ಮಂಡಲ ಮಧ್ಯದೊಳಗೆ’ ಎಂದು ಕೇಳುತ್ತಿದ್ದಂತೆಯೇ ಪುಣ್ಯಕೋಟಿಯ ಹಾಡು ನೆನಪಿಗೆ ಬರುತ್ತದೆ. ಈಗ ಅದೇ ಹೆಸರಿನಲ್ಲಿ ಸದ್ದಿಲ್ಲದೆ ಒಂದು ಚಿತ್ರ ತಯಾರಾಗಿದೆ. ‘ಗುಳ್ಟು’ ಖ್ಯಾತಿಯ ನವೀನ್ ಶಂಕರ್ ಮತ್ತು ಐಶಾನಿ ಜತೆಯಾಗಿ ನಟಿಸಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ಹೆಸರು ಕೇಳಿದರೆ ಚಿತ್ರಕ್ಕೂ, ಪುಣ್ಯಕೋಟಿಯ ಕಥೆಗೂ ಏನಾದರೂ ಸಂಬಂಧ ಇರಬಹುದು ಎಂದೆನಿಸಬಹುದು. ಆದರೆ, ಆ ಕಥೆಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಶಿಕಾರಿಪುರ. ಇದೊಂದು ಕ್ರೖೆಂ ಡ್ರಾಮಾ ಚಿತ್ರ ಎನ್ನುವ ಅವರು, ‘ಈ ಧರಣಿ ಮಂಡಲ ಮಧ್ಯದೊಳಗೆ ನಾವು ನಮ್ಮೆಲ್ಲರ ಕಥೆಯನ್ನು ತೋರಿಸುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.

ಕಥೆ ಕೇಳುತ್ತಿದ್ದಂತೆಯೇ ಬಹಳ ಇಂಟರೆಸ್ಟಿಂಗ್ ಆಗಿದೆ ಎಂದು ನವೀನ್​ಗೆ ಅನಿಸಿತಂತೆ. ‘ಚಿತ್ರದಲ್ಲಿ ಆದಿ ಎಂಬ ಪಾತ್ರ ಮಾಡಿದ್ದೇನೆ. ಬಾಕ್ಸಿಂಗ್​ನಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಅವನದು. ಒಂದು ಘಟನೆಯಿಂದ ಅವನ ಜೀವನ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ ನವೀನ್.

ಇಲ್ಲಿಯವರೆಗೂ ಕಾಣಿಸಿಕೊಳ್ಳದ ಲುಕ್​ನಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ಐಶಾನಿ, ‘ನನ್ನನ್ನು ಬೇರೆ ರೀತಿ ತೋರಿಸಿದ್ದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್. ಪಾತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ. ಬೋಲ್ಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಈ ರೀತಿ ಪಾತ್ರ ಮಾಡಿದ್ದು ನನಗೂ ಸವಾಲಾಗಿತ್ತು’ ಎನ್ನುತ್ತಾರೆ ಅವರು. ಓಂಕಾರ್ ನಿರ್ವಿುಸಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ಶಾಂಭವಿ, ಸಿದ್ದು ಮೂಲಿಮನಿ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net