

ರಾವಣ್’ ಸಿನಿಮಾದ ನಂತರ ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಮತ್ತು ತಮಿಳಿನ ವಿಕ್ರಮ್ ಮತ್ತೆ ಒಂದಾಗಿದ್ದಾರೆ.
ಹೌದು, ಮಣಿರತ್ನಂ ನಿರ್ದೇಶನ ಮಾಡುತ್ತಿರುವ ಕಾಲ್ಪನಿಕ ಐತಿಹಾಸಿಕ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರ ಕಲ್ಕಿ ಕೃಷ್ಣಮೂರ್ತಿಯವರ ‘ಪೊನ್ನಿಯನ್ ಸೆಲ್ವನ್’ ಕಾದಂಬರಿಯನ್ನು ಆಧರಿಸಿದೆ. ಈ ಕಾದಂಬರಿಯನ್ನು 1994ರಲ್ಲಿಯೇ ಸಿನಿಮಾ ಮಾಡುವುದಾಗಿ ಹೇಳಿದ್ದ ಮಣಿರತ್ನಂ, ಕಳೆದ ಡಿಸೆಂಬರ್ನಲ್ಲಿ ಚಿತ್ರೀಕರಣ ಆರಂಭಿಸಿದ್ದಾರೆ. ಇದೊಂದು ಬಹುಭಾಷಾ ಚಿತ್ರವಾಗಿದ್ದು, ಬಾಲಿವುಡ್ ಮತ್ತು ದಕ್ಷಿಣ ಭಾರತದ ಖ್ಯಾತ ನಟರು ಇದರಲ್ಲಿ ನಟಿಸುತ್ತಿದ್ದಾರೆ.
ತ್ರಿಶಾ, ಜಯಂ ರವಿ, ಕಾರ್ತಿ ಮುಂತಾದವರ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. 10 ಮತ್ತು 11ನೇ ಶತಮಾನದ ಚೋಳ ರಾಜ ಅರುಳ್ ಮೋಜಿವರ್ಮನ್ ಕಥೆಯನ್ನು ಹೇಳುವ ಈ ಚಿತ್ರದ ನಂದಿನಿ ಎನ್ನುವ ಪಾತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಆದಿತ್ಯ ಕರಿಕಾಳನ್ ಎಂಬ ಪಾತ್ರದಲ್ಲಿ ವಿಕ್ರಮ್ ಅಭಿನಯಿಸಲಿದ್ದು, ಐಶ್ವರ್ಯಾ ರೈ ಅವರ ಜತೆ ಹೆಚ್ಚು ಸೀನ್ಗಳು ಇರಲಿವೆಯಂತೆ.
ಈಗಾಗಲೇ ಥಾಯ್ಲೆಂಡ್ನಲ್ಲಿ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಮಣಿರತ್ನಂ. ಈ ವರ್ಷ ಪೂರ್ತಿ ದೇಶಾದ್ಯಂತ ಶೂಟಿಂಗ್ ಮಾಡಲಿದ್ದಾರೆ. ಅವರು ಈ ಚಿತ್ರವನ್ನು 2021ಕ್ಕೆ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. -ಏಜೆನ್ಸೀಸ್