ಮತ್ತೆ ಹಿಂದಿಗೆ ಐಂದ್ರಿತಾ, ಮಾಯಾ ವೆಬ್​ಸಿರೀಸ್​ನಲ್ಲಿ ನಟನೆ

Andritha
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಐಂದ್ರಿತಾ ರೇ ಕನ್ನಡದ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಹಿಂದಿಯಲ್ಲಿಯೂ ‘ರಾವಣ್ ಲೀಲಾ’ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಮತ್ತೆ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ ಐಂದ್ರಿತಾ! ಹಾಗೆಂದ ಮಾತ್ರಕ್ಕೆ ಮತ್ತೊಂದು ಹಿಂದಿ ಸಿನಿಮಾ ಒಪ್ಪಿಕೊಂಡರಾ ಎಂದುಕೊಳ್ಳಬೇಡಿ. ಬದಲಿಗೆ ಹಿಂದಿಯ ವೆಬ್​ಸಿರೀಸ್​ವೊಂದಕ್ಕೆ ಐಂದ್ರಿತಾ ಸಹಿ ಮಾಡಿದ್ದಾರೆ. ಹಿಂದಿಯಲ್ಲಿ ಹಾರರ್ ಸಿನಿಮಾ ಚಿತ್ರಗಳನ್ನು ನೀಡಿದ ವಿಕ್ರಂ ಭಟ್, ‘ಮಾಯಾ’ ಪ್ರಾಂಚೈಸಿಯ ನಾಲ್ಕನೇ ಭಾಗವನ್ನು ಕೈಗೆತ್ತಿಕೊಂಡಿದ್ದು, ಥ್ರಿಲ್ಲರ್ ಶೈಲಿಯಲ್ಲಿನ ‘ಮಾಯಾ 4’ ವೆಬ್​ಸಿರೀಸ್​ಗೆ ಇದೀಗ ಹೊಸದಾಗಿ ಐಂದ್ರಿತಾ ಸೇರ್ಪಡೆಯಾಗಿದ್ದಾರೆ. ವಿಕ್ರಂ ಭಟ್ ಅವರ ಪುತ್ರಿ ಕೃಷ್ಣಾ ಭಟ್ ನಿರ್ದೇಶನ ಮಾಡಲಿದ್ದಾರೆ.

ಈ ವೆಬ್​ಸರಣಿ ಬಗ್ಗೆ ಮಾಹಿತಿ ನೀಡುವ ಐಂದ್ರಿತಾ, ‘ಈ ಹಿಂದೆ ‘ದಿ ಕ್ಯಾಸಿನೊ’ ವೆಬ್​ಸಿರೀಸ್​ನಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಇದೀಗ ‘ಮಾಯಾ 4’ರಲ್ಲಿ ಮುಖ್ಯ ಭೂಮಿಕೆಯಲ್ಲಿರಲಿದ್ದೇನೆ. ನೆಗೆಟಿವ್ ಪಾತ್ರಗಳ ಮೂಲಕವೇ ಗುರುತಿಸಿಕೊಂಡ ರೋಹಿತ್ ರಾಯ್ ಇಲ್ಲಿಯೂ ಅಂಥದ್ದೇ ಪಾತ್ರ ಮಾಡಲಿದ್ದಾರೆ’ ಎನ್ನುವ ಐಂದ್ರಿತಾ, ‘ಇಂದೋರ್ ಬಳಿಯ ಹಳ್ಳಿಯೊಂದರಿಂದ ಬಂದ ಯುವತಿಯೊಬ್ಬಳು, ಮುಂಬೈನಲ್ಲಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾಳೆ ಮತ್ತು ಅದರಿಂದ ಹೇಗೆ ಹೊರಬರುತ್ತಾಳೆ ಎಂದು ಹೇಳುವ ಪಾತ್ರ ನನ್ನದು. ಬುಧವಾರದಿಂದ ಶೂಟಿಂಗ್ ಶುರುವಾಗಿದೆ. ಒಟ್ಟು 30 ದಿನದಲ್ಲಿ ಚಿತ್ರೀಕರಣ ಮುಗಿಯಲಿದೆ’ ಎನ್ನುತ್ತಾರವರು. ಎಂಎಕ್ಸ್ ಮೂವಿ ಪ್ಲೆಯರ್ ಓಟಿಟಿ ವೇದಿಕೆಯಲ್ಲಿ ಈ ವೆಬ್​ಸರಣಿ ಸ್ಟ್ರೀಮ್ ಆಗಲಿದೆ. ಕನ್ನಡದಲ್ಲಿ ‘ಗರುಡ’ ಮತ್ತು ‘ಪ್ರೇಮಂ ಪೂಜ್ಯಂ’ ಚಿತ್ರ ಮುಗಿಸಿದ್ದಾರೆ. ದಿಗಂತ್ ಜತೆಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net