

ಬೆಂಗಳೂರು: ತೆರೆಮೇಲೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಿಯಲ್ ಲೈಫ್ ಜೋಡಿ ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ರೇ, ಇದೀಗ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರದ ಹೆಸರು ‘ತಿಮ್ಮಯ್ಯ ಆಂಡ್ ತಿಮ್ಮಯ್ಯ’. ತಾತ ಮತ್ತು ಮೊಮ್ಮಗನ ನಡುವಿನ ಸಂಬಂಧದ ಕುರಿತ ಸಿನಿಮಾ ಇದಾಗಿದ್ದು, ದಿಗಂತ್ ನಾಯಕನಾಗಿ ಕಾಣಿಸಿದರೆ, ಅವರಿಗೆ ಐಂದ್ರಿತಾ ಮತ್ತು ಶುಭ್ರ ಅಯ್ಯಪ್ಪ ಜತೆಯಾಗಿದ್ದಾರೆ. ಈ ಚಿತ್ರದ ಬಗ್ಗೆ ಸ್ವತಃ ಐಂದ್ರಿತಾ ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ಮತ್ತೆ ದಿಗಂತ್ ಈಗಾಗಲೇ ‘ಮನಸಾರೆ’, ‘ಪಾರಿಜಾತ’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದೇವೆ. ಅನಿರೀಕ್ಷಿತವಾಗಿ ಇಬ್ಬರಿಗೂ ಸಿಕ್ಕ ಪ್ರಾಜೆಕ್ಟ್ ಇದು. ಅನಂತ್ ನಾಗ್ ಅವರೊಂದಿಗೆ ಹೆಚ್ಚು ಕಾಣಿಸಿಕೊಳ್ಳುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ನವೆಂಬರ್ನಲ್ಲಿ ನನ್ನ ಭಾಗದ ಚಿತ್ರೀಕರಣ ಶುರುವಾಗಲಿದೆ’ ಎನ್ನುವ ಐಂದ್ರಿತಾ, ಇದಲ್ಲದೆ ಹಿಂದಿ ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ. ‘ಬಾಲಿವುಡ್ನ ಖ್ಯಾತ ನಿರ್ದೇಶಕ ವಿಕ್ರಂ ಭಟ್ ಅವರ ‘ಕೋಲ್ಡ್’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದೇನೆ. ಈಗಾಗಲೇ ಆ ಚಿತ್ರದ ಶೂಟಿಂಗ್ ಸಹ ಶುರುವಾಗಿದೆ. ಇದೇ ಶುಕ್ರವಾರ ‘ಭವೈ’ ಎಂಬ ಇನ್ನೊಂದು ಹಿಂದಿ ಚಿತ್ರವೂ ಬಿಡುಗಡೆ ಆಗುತ್ತಿದೆ’ ಎಂಬುದು ಐಂದ್ರಿತಾ ಮಾತು. ‘ತಿಮ್ಮಯ್ಯ ಆಂಡ್ ತಿಮ್ಮಯ್ಯ’ ಚಿತ್ರದ ಸರಳ ಮುಹೂರ್ತ ವಿಜಯದಶಮಿಯಂದು ನೆರವೇರಿದ್ದು, ಸಂಜಯ್ ಶರ್ಮಾ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ರಾಜೇಶ್ ಶರ್ಮಾ ಚಿತ್ರ ನಿರ್ವಿುಸುತ್ತಿದ್ದಾರೆ.